Dhampathyavannu-subhadravagi-belesalu-7-vidhanagalu

ಸೂಕ್ತ ಸಂಗಾತಿ ದೊರೆತು ಬದುಕು ಸುಖಮಯವಾಗಿ ಚಲಿಸುತ್ತಿರುವಾಗ  ಮನೆಗೆ ಪುಟಾಣಿ ಕಂದನ ಆಗಮನದಿಂದ ಕುಟುಂಬ ಸಂಪೂರ್ಣವೆನಿಸುತ್ತದೆ. ಬದುಕಲ್ಲಿ ಬೇರೆ ಆಯಾಮದ ಹೊಂಗನಸುಗಳು ಮೂಡಿ ,ಬಾಳು ಸುಂದರವೆನಿಸುತ್ತದೆ.

ಆದರೆ ನಿಮಗೆ ಗೊತ್ತೇ? ನಿಮ್ಮ ಮಗು ನಿಮ್ಮ ದಾಂಪತ್ಯದ ಕೊಂಡಿಯನ್ನು ಎಷ್ಟು ಸುಭದ್ರವಾಗಿ ಬೆಸೆಯುತ್ತಿದೆಯೆಂದು? ಹಾಗಾದರೆ ಈ ಲೇಖನ ನಿಮಗೆ …

1. ಕೇವಲ ದಂಪತಿಗಳಾದ ನೀವು ಒಂದು ಪರಿವಾರವಾಗುತ್ತೀರಿ.

ಮೊದಲು ಕೇವಲ ಜೋಡಿ ಹಕ್ಕಿಗಳಾಗಿದ್ದ ನಿಮ್ಮನ್ನು ಈ ಮಗು ತಂದೆ ತಾಯಿಯರ ದರ್ಜೆಗೆ ಏರಿಸುತ್ತದೆ . ನೀವು ಜೊತೆಯಾಗಿ ಮಾಡುವ ಮಗುವಿನ ಲಾಲನೆ ಪಾಲನೆ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

2. ನಿಮ್ಮ ಪುಟಾಣಿ ಕಂದನ ಜೊತೆ ನಿಮ್ಮ ಸಂಗಾತಿಯ ಮನಮೋಹಕ ತುಂಟಾಟಗಳು.

ನಿಮ್ಮ ಪತಿ ಮಗುವಿನ ಜೊತೆ ಮಗುವಿನಂತೆ ಹಾಡುವುದು, ಆಡುವುದು, ಮುದ್ದಾಡುವುದು, ಇವೆಲ್ಲ ನಿಮ್ಮ ಸಂಗಾತಿಯ ಜೊತೆ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಎಂದೂ ಹಾಡದೆ ಇರುವ ಪತಿಯು ಮಗುವಿಗೋಸ್ಕರ ಲಾಲಿ ಹಾಡುವುದನ್ನು ನೋಡಿದಾಗಲಂತೂ ನಿಮ್ಮ ಹೃದಯವು  ಪ್ರೇಮರಾಗವನ್ನು ಹಾಡಲು ಶುರು ಮಾಡುತ್ತದೆ.

3. ನಿಮ್ಮ ಮಗುವು ಮನೆಯಲ್ಲಿ ನಗೆಯ ಹಬ್ಬವನ್ನೇ  ನಿರ್ಮಿಸುತ್ತದೆ.

ಪುಟಾಣಿ ಮಗುವು ನಿಮ್ಮ ಮನೆಯ ಸಂಪೂರ್ಣ ವಾತಾವರಣವನ್ನೇ ಬದಲಾಯಿಸುತ್ತದೆ. ವಾಸ್ತುಶಾಸ್ತ್ರ ನಿಮ್ಮ ಮನೆಗೆ ತರಲಾರದ ಶಾಂತಿಯನ್ನು ಈ ನಿಮ್ಮ ಪುಟ್ಟ ಮಗು ತರುತ್ತದೆ. ಆದರೆ ಸ್ನಿಗ್ಧ ಮನಮೋಹಕ ನಗು, ಹಠಮಾರಿಯಾಗಿ ಕಾಡಿಸಿ ಅಳುವುದು, ನಿಮ್ಮ ಕಡೆಗೆ ತನ್ನ ಪುಟಾಣಿ ಹೆಜ್ಜೆಯಿಂದ ನಡೆದುಬರಲು ಮಾಡುವ ಚಿಕ್ಕ ಚಿಕ್ಕ ಪ್ರಯತ್ನಗಳು, ನಿಮ್ಮನ್ನು ಕರೆಯಲು ಬಳಸುವ ತೊದಲು ನುಡಿ, ಇವೆಲ್ಲಾ ನಿಮ್ಮ ಅಸ್ತಿತ್ವವನ್ನು ಸಂತೋಷದ ಸಾಗರದಲ್ಲಿ ಮುಳುಗಿಸುತ್ತದೆ.

4. ಏಕಾಂತತೆಯನ್ನು ಕೂಡ ಆಸ್ವಾದಿಸುತ್ತೀರಿ.

ಮೊದಲೆಲ್ಲ ನಿಮ್ಮ ಪತಿಯು ತನ್ನ ಕೆಲಸ ಕಾರಣಗಳಿಂದ ಮನೆಗೆ ಬರಲು ತಡವಾದಾಗ ಬೇಸರ ಮೂಡಿ ಸಿಟ್ಟಾಗುತ್ತಿದ್ದೀರಿ; ಆದರೆ ಈಗ ನಿಮಗೆ ಸಮಯ ಹೇಗೆ ಕಳೆಯುತ್ತದೆಯೆಂದು ಗೊತ್ತಾಗುವುದೇ ಇಲ್ಲ. ನಿಮ್ಮ ಮಗುವಿನೊಂದಿಗೆ ಇರುವ ಏಕಾಂತ ಸಮಯವನ್ನು ಕೂಡ ಆನಂದದಿಂದ ಕಳೆಯುತ್ತೀರ.

5. ನಿಮ್ಮ ಒತ್ತಡ ನಿವಾರಕ.

ಎಷ್ಟೋ ಸಲ ಮಗುವು ನಿಮ್ಮ ಜವಾಬ್ದಾರಿಗಳನ್ನು ಜಾಸ್ತಿ ಮಾಡಿ ನಿಮ್ಮನ್ನು ಆದಷ್ಟು ಒತ್ತಡಕ್ಕೀಡು ಮಾಡುತ್ತದೆ. ಎಷ್ಟೋ ಸಲ ಮಗುವಿನಿಂದ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೂ ಉಂಟು. ಆದರೆ ನಿಮ್ಮ ಮಗುವು ನಿಮ್ಮ ಹೆಸರನ್ನು ಕೂಗುತ್ತಾ ಬಂದು ನಿಮ್ಮನ್ನು ಅಪ್ಪಿಕೊಂಡಾಗ  ಅಥವಾ ನಿಮ್ಮ ಕೊರಳಿಗೆ ಹಾರುವಾಗ ನೀವು ನಿಮ್ಮ ಎಲ್ಲಾ ಬೇಸರ ಒತ್ತಡಗಳನ್ನು ಮರೆಯುತ್ತೀರಿ. ಅದರ ಜೊತೆ ಆಡುವ ಆಟ ತುಂಟಾಟಗಳೇ ನಿಮ್ಮ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತವೆ.

6. ಪರಸ್ಪರ ಸಮಯ ಕಳೆಯಲು ಪ್ರಯತ್ನಿಸುತ್ತೀರಿ.

ಮೊದಲು ನೀವಿಬ್ಬರೇ ಇದ್ದಾಗ, ಪರಸ್ಪರ ಸಾಕಷ್ಟು ಸಮಯ ಕಳೆಯುತ್ತಿದ್ದೀರಿ. ಆದರೆ ಮಗುವಿನ ಆಗಮನದಿಂದ ನಿಮ್ಮ ಸಾಕಷ್ಟು ಸಮಯ ಮಗುವಿನ ಲಾಲನೆ ಪಾಲನೆಯಲ್ಲಿ ಕಳೆಯುವುದರಿಂದ ನಿಮಗೆ ಪರಸ್ಪರ ಸಮಯ ಹೊಂದಿಸುವುದು ಕಷ್ಟವೇ ಸರಿ. ಆಗ ನಿಮ್ಮ ಪತಿಯು ನಿಮ್ಮ ಜೊತೆ ಇರಲು ಮಾಡುವ ಪ್ರಯತ್ನಗಳು, ಅವರು ನಿಮ್ಮನ್ನು ಅಚ್ಚರಿಗೊಳಿಸಲು ತರುವ ಕಾಣಿಕೆಗಳು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ.

7. ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸುವುದು.

ನಿಮ್ಮ ಪುಟಾಣಿ ಕಂದನನ್ನು ಯಾವ ಶಾಲೆಗೆ ಕಳಿಸಬೇಕು, ಏನೆಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಇಬ್ಬರು ಕುಳಿತು ಜೊತೆ ಜೊತೆಯಾಗಿ ಚರ್ಚಿಸುವುದು ತುಂಬಾ ಹಿತಕಾರಿ ಎನಿಸುತ್ತದೆ

ನಿಮ್ಮ ಮಗು  ನಿಮ್ಮ ಬದುಕಿಗೆ ಕೇವಲ ಹೊಸ ಆಯಾಮವನ್ನಷ್ಟೇಯಲ್ಲ ,ನಿಮ್ಮಿಬ್ಬರ ಪರಸ್ಪರ ಪ್ರೀತಿಯನ್ನು ಕೂಡ ವೃದ್ಧಿಸುತ್ತದೆ. ನಿಮ್ಮ ದಾಂಪತ್ಯದ ಬೆಸುಗೆಯನ್ನು ಭದ್ರವಾಗಿ ಬೆಸೆಯಲು ಆ ದೇವರು ಕಳಿಸಿದ ಅಪರೂಪದ ಉಡುಗೊರೆಯೇ  ಈ ಮಗು.

ಆದುದರಿಂದ ತಾಯಿಯಾಗಲು ಹೆದರದಿರಿ ಮಹಿಳೆಯರೆ…

Leave a Reply

%d bloggers like this: