ಒಡಲಲ್ಲಿ ಚಿಗುರಿದ ಜೀವವನ್ನು ಭುವಿಗೆ ತರುವ ಕೆಲಸ ಸುಲಭದ್ದಲ್ಲ. ಹೆರಿಗೆಯೆಂದರೆ ಮರು ಜನ್ಮ. ಪ್ರತಿ ಹೆಣ್ಣೂ ತನಗೇನಾದರೂ ಆಗಲಿ ಆದರೆ ತನ್ನ ಕಂದ ಚೆನ್ನಾಗಿರಲಿ ಎಂಬ ಆಶಯ ಹೊತ್ತುಕೊಂಡೇ ಆಸ್ಪತ್ರೆ ಮೆಟ್ಟಿಲೇರುತ್ತಾಳೆ. ಆತಂಕದ ಮೂಟೆಯನ್ನು ಬಗಲಲ್ಲಿಟ್ಟುಕೊಂಡೇ ನಿರಾತಂಕದ ಮುಖವಾಡ ಧರಿಸಿ ಹೆರಿಗೆ ವಾರ್ಡ್ ನಲ್ಲಿ ಮಲಗುತ್ತಾಳೆ. ಎಷ್ಟೇ ಪ್ರಯತ್ನವಿದ್ದರೂ ವಿಧಿಯ ರೀತಿ ನೀತಿಗಳು ನೂರಿದ್ದಾಗ ಇವೆಲ್ಲ ಸಹಜವೆ. ಪ್ರತಿ ಬಸುರಿನಲ್ಲೂ ಭಿನ್ನತೆಯಿದ್ದ ಹಾಗೆ ಪ್ರತಿ ಹೆರಿಗೆಯಲ್ಲೂ ನಮೂನೆಗಳುಂಟು.
ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಮಯವಿರುವುದಿಲ್ಲ.ಆದರೆ ತ್ವಚೆಯ ರಕ್ಷಣೆಯ ಬಗ್ಗೆ ಗಮನ ಹರಿಸದಿದ್ದರೆ ತ್ವಚೆಯು ಕಾಂತಿಯು ಕಳೆದುಕೊಳ್ಳುತ್ತಾ ಹೋಗುತ್ತದೆ . ಆದರೆ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ತ್ವಚೆಯ ಕಾಂತಿಯನ್ನು ಮರಳಿ ಪಡೆಯಬಹುದಾಗಿದೆ. ಏಕೆ ಮತ್ತು ಹೇಗೆ ಎಂದು ತಿಳಿಯಬೇಕೆ? ಮುಂದಕ್ಕೆ ಓದಿ.
ಹೆರಿಗೆಯ ನಂತರ ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ದೇಹದ ಮೇಲೆ ಕಪ್ಪು ಕಲೆಗಳು ಉಂಟಾಗುವುದು, ಮೊಡವೆ, ತುರಿಕೆ, ಚರ್ಮದ ಮೇಲೆ ಗೆರೆಗಳು ಬೀಳುವುದರಿಂದಾಗಿ ದೇಹದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆರಿಗೆಯ ನಂತರ ಸಾಮಾನ್ಯವಾಗಿ ಬರುವ ಈ ಚರ್ಮ ಕಾಯಿಲೆ ಹಾಗೂ ಗುಣಪಡಿಸುವ ರೀತಿಯನ್ನು ಕುರಿತು ತಿಳಿಯಿರಿ.
1. ಹೆರಿಗೆಯ ನಂತರ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಚರ್ಮದ ಮೇಲೆ ಗೆರೆಗಳು ಮೂಡುತ್ತವೆ. ಪೌಷ್ಠಿಕ ಆಹಾರಗಳ ಸೇವನೆ ಹಾಗೂ ದೇಹಕ್ಕೆ ಆಲೀವ್ ಅಥವಾ ಬಾದಮಿ ಎಣ್ಣೆಗಳಿಂದ ಮಸಾಜ್ ಮಾಡುತ್ತಾ ಬಂದರೆ ಆ ಗೆರೆಗಳು ಮಾಯವಾಗುತ್ತದೆ.
2. ಹೆರಿಗೆಯ ನಂತರ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮುಖದ ಮೇಲೆ ಮೊಡವೆಗಳು ಬಿದ್ದು ತ್ವಚೆಯ ಅಂದ ಕೆಡುತ್ತದೆ. ಆದರೆ ಒಳ್ಳೆಯ ಆಹಾರ ಕ್ರಮ ಹಾಗೂ ಅತೀ ಹೆಚ್ಚು ನೀರನ್ನು ಕುಡಿಯುವುದರಿಂದ ಈ ರೀತಿಯ ಸಮಸ್ಯೆಗಳಿಂದ ಮುಕ್ತರಾಗಬಹುದು.
3. ಹೆರಿಗೆಯ ನಂತರ ಕೆಲವೊಮ್ಮೆ ಮುಖದಲ್ಲಿ, ಹಣೆಯಲ್ಲಿ, ಕತ್ತಿನ ಹತ್ತಿರ ಕಪ್ಪು ಕಲೆಗಳು ಉಂಟಾಗುತ್ತವೆ. ದೇಹದಲ್ಲಿ ಅಧಿಕ ಮೆಲನಿನ್ ಉತ್ಪತ್ತಿ ಹಾಗೂ ಈಸ್ಟ್ರೋಜನ್, ಪ್ರೊಗೆಸ್ಟ್ರೋನ್ ವ್ಯತ್ಯಾಸದಿಂದಾಗಿ ಈ ರೀತಿ ಕಲೆಗಳು ಉಂಟಾಗುತ್ತವೆ. ಸ್ವಲ್ಪ ತಿಂಗಳುಗಳಲ್ಲಿ ಅದರಷ್ಟಕ್ಕೆ ಕಲೆಗಳು ಕಡಿಮೆಯಾಗುತ್ತವೆ. ಬಿಸಿಲಿಗೆ ಹೆಚ್ಚಾಗಿ ಹೋಗಬೇಡಿ.
4. ಅಧಿಕ ಸೊಪ್ಪು ತರಕಾರಿಗಳ ಸೇವನೆಯು ದೇಹವನ್ನು ಆರೋಗ್ಯವಾಗಿ ಇಡುವುದರೊಂದಿಗೆ ಹೆರಿಗೆಯ ನಂತರ ಖಿನ್ನತೆಗೆ ಒಳಗಾಗದಂತೆ ತಡೆಯುತ್ತದೆ.
5. ಹೆರಿಗೆಯ ನಂತರ ದೇಹದಲ್ಲಿ ಈಸ್ಟ್ರೋಜನ್ ಅಂಶ ಕಡಿಮೆಯಾಗುವುದರಿಂದ ಗುಳ್ಳೆಗಳು ಉಂಟಾಗುತ್ತವೆ. ಆದುದರಿಂದ ದಿನಕ್ಕೆ ಎರಡು ಬಾರಿ ಆದರೂ ಬಾಡಿಲೋಷನ್ ಉಪಯೋಗಿಸಿ, ಸ್ನಾನಕ್ಕೆ ಹರ್ಬಲ್ ಸೋಪುಗಳನ್ನು ಬಳಸಿ. ಈ ರೀತಿ ಮಾಡುವುದರಿಂದ ಕಾಂತಿಯುಕ್ತವಾದ ತ್ವಚೆಯು ನಿಮ್ಮದಾಗುವುದು.
ಹೆರಿಗೆಯ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳುವುದೂ ಅತ್ಯಗತ್ಯ .