maduve-nantara-tavaru-nenapisuva-sangatigalu-11

ತವರು ಮನೆ, ನೀವು ಹುಟ್ಟಿದಾಗಿನಿಂದ ಇದ್ದ ಮನೆ, ನಿಮ್ಮ ಎಲ್ಲಾ ನೆನಪುಗಳು ವಾಸಿಸುವ ಮನೆ. ತವರು ಮನೆಯೆಂಬ ಒಂದು ಕಟ್ಟದಲ್ಲಿ ನೀವು ಮನಸಾರೆ ನಕ್ಕು ಖುಷಿ ಪಟ್ಟಿದ್ದೀರಿ, ಒಮ್ಮೊಮ್ಮೆ ಮೂಲೆಯಲ್ಲಿ ಕೂತು ಅತ್ತಿದ್ದೀರಿ. ಎಷ್ಟೊಂದು ಸಂಜೆಗಳು ಅಪ್ಪ ಅಮ್ಮನೊಡನೆ ಚಹಾ ಕುಡಿಯುತ್ತಾ ಹರಟೆ ಹೊಡೆದಿದ್ದೀರಿ, ಎಷ್ಟೊಂದು ರಾತ್ರಿಗಳು ತಮ್ಮ ತಂಗಿಯರೊಡನೆ ಕೀಟಲೆ ಮಾಡುತ್ತಾ  ನಕ್ಕು ನಕ್ಕು ಸುಸ್ತಾಗಿದ್ದೀರಿ. ಈ ಬೆಚ್ಚಗಿನ, ಹಿತಕರವಾದ, ನಿಮಗೆ ತುಂಬಾ ಪರಿಚಯ ಇರುವ ಜಾಗವನ್ನು ಮದುವೆಯ ನಂತರ ನೀವು ಬಿಟ್ಟು ಬರಬೇಕು. ಅದೇ ಜೀವನ ಅಲ್ಲವೇ, ಬದಲಾವಣೆಯ ಜಗದ ನಿಯಮ. ನೀವು ಒಂದಷ್ಟು ದಿನಗಳ ಕಾಲ ಆ ಮನೆಯಲ್ಲಿ ಪುನಃ ಕಳೆಯಬೇಕೆಂದು ಯಾವಾಗಲು ಯೋಚಿಸುತಿರುತ್ತೀರಿ. ಕಳೆದುಕೊಂಡ ಮೇಲೆ ಬೆಲೆ ಗೊತ್ತಾಗುವುದು ಅನ್ನುತ್ತಾರಲ್ಲ, ಅದು ಇವಾಗ ಅರಿವಾಗುತ್ತದೆ.

ನಿಮ್ಮ ತವರು ಮನೆಯನ್ನು ನೆನಪಿಸುವಂತಹ ೭ ಸಂಗತಿಗಳು ಇಲ್ಲಿವೆ :

೧. ಅಮ್ಮನ ಕೈರುಚಿ

ಅಮ್ಮನ ಅಡುಗೆ ಅಂದರೆ ನಮ್ಮೆಲ್ಲರಿಗೂ ೩ ಹೊಟ್ಟೆ ! ಅಮ್ಮನ ಊಟ ಕೇವಲ ಅವಳು ಉಪಯೋಗಿಸಿದ ಸಾಮಗ್ರಿಗಳಿಂದ ರುಚಿಯಾಗಿ ಇರುವುದಿಲ್ಲ. ಅದರ ಹಿಂದಿನ ಆಕೆಯ ಪ್ರೀತಿ ಅದರ ರುಚಿಯನ್ನು ದ್ವಿಗುಣಗೊಳಿಸುತ್ತದೆ. ನೀವು ಮದುವೆಯಾಗಿ ನೀವೇ ಅಡುಗೆ ಮಾಡುತ್ತಿರುವಾಗ, ನಿಮ್ಮ ಅಮ್ಮ ನಿಮಗೆ ಅಡುಗೆ ಮಾಡಿ ತಂದು ಬಡಿಸುವಾಗ ಬೀರುತ್ತಿದ್ದ ನಗುವನ್ನು ನೀವು ನೆನಪಿಸಿಕೊಳ್ಳುತ್ತೀರಿ. ಆಕೆ ಮಾದುತ್ತಿದ ಸಾಧಾರಣ ಅಡುಗೆಯ ಎಷ್ಟೊಂದು ಇಷ್ಟವಾಗುತ್ತಿತ್ತು ಎನ್ನುವುದು ಗೊತ್ತಾಗುತ್ತದೆ. ನೀವು ಊಟ ಮಾಡುವವರೆಗೂ ಆಕೆ ಊಟ ಮಾಡುತ್ತಿರಲಿಲ್ಲ . ಅವಳು ಮಾಡುತ್ತಿದ್ದ ಚಪಾತಿ, ಅನ್ನ, ಮುದ್ದೆ ಎಲ್ಲವು ಸ್ವರ್ಗಮಯ !

೨. ಸುಖನಿದ್ರೆ

ಅಮ್ಮ ೧೦ ಸಾರಿ ಬಾಯಿ ಬಡಿದುಕೊಂಡರು ಮಂಚ ಬಿಟ್ಟು ಎದ್ದು ಬರುತ್ತಿರಲಿಲ್ಲ. ರಾತ್ರಿ ತಡವಾಗಿ ಮಲಗಿ, ಬೆಳಗ್ಗೆ ತಡವಾಗಿ ಎದ್ದರು ನಡೆಯುತ್ತಿತ್ತು. ಆದರೂ ನೀವು ಎದ್ದು ಬಂದೊಡನೆ ನಿಮಗೆ ಕಾಫಿ ತಯಾರಾಗಿ ಟೇಬಲ್ ನ ಮೇಲೆ ಇರುತ್ತಿತ್ತು. ಮದುವೆಯಾದ ಮೇಲೆ ಸೂರ್ಯೋದಯ ಆಗಿದೊಡನೆ ನೀವು ಎದ್ದು, ಬೇರೆಯವರನ್ನು ಎಬ್ಬಿಸಬೇಕು. ನೀವು ಹೊದಿಕೆ ಹೊದ್ದಿಕೊಂಡು, ಯಾರು ಕೇಳುವರು ಎಂಬಂತೆ ಬೆಚ್ಚನೆ ಆರಾಮಾಗಿ ಮಲಗುತ್ತಿದ್ದನ್ನು ಹಪಹಪಿಸುತ್ತೀರಿ.

೩. ಸಹೋದರ-ಸಹೋದರಿಯರು

“ಅಮ್ಮ ನೋಡಮ್ಮ ಇವ್ನು ನನಿಗೆ ಚಿವುಟುತಿದಾನೆ” “ಅಮ್ಮ ನೋಡಮ್ಮ  ಇವ್ಳು ಟಿ ವಿ ರಿಮೋಟ್ ಎಲ್ಲೋ ಬಚ್ಚಿಟ್ಟಿದ್ದಾಳೆ” “ಅಮ್ಮ ಐಸ್ ಕ್ರೀಂ ಎಲ್ಲ ಇವನೊಬ್ಬನೇ ತಿನ್ತಿದಾನೆ” ! ನೆನಪಿದೆಯ ಅಣ್ಣ-ತಮ್ಮ/ ಅಕ್ಕ-ತಂಗಿ ಯ ಜೊತೆಗಿನ ಆ ಮುದ್ದಾದ ಜಗಳಗಳು, ಕೀಟಲೆಗಳು, ಆಟ ಆಡುವುದು? ಅವರು ಒಮ್ಮೊಮ್ಮೆ ನಿಮ್ಮ ವೈರಿ, ಒಮ್ಮೊಮ್ಮೆ ನಿಮ್ಮ ಕುಚಿಕು, ಒಟ್ಟಿನಲ್ಲಿ ನಿಮ್ಮೊಂದಿಗೆ ಯಾವಾಗಲು ಅಂತೂ ಇರುತ್ತಿದ್ದರು. ಅವರು ನಿಮಗೆ ಎಷ್ಟೇ ಕಾಟ ಕೊಟ್ಟಿದ್ದರು, ನಿಮಗೆ ಎಷ್ಟೇ ರೇಗಿಸಿದ್ದರೂ, ನಿಮ್ಮ ಬಗ್ಗೆ ಅಪ್ಪ ಅಮ್ಮನ ಬಳಿ ಎಷ್ಟೇ ಚಾಳಿ ಹೇಳಿದರು, ನೀವು ಅವರೊಂದಿಗೆ ಕಳೆಯುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತೀರಿ.

೪. ಅಪ್ಪನ ಬುದ್ದಿಮಾತು

ಅಪ್ಪ ನಮ್ಮೊಂದಿಗೆ ಕೂತು ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿದ್ದ ರೀತಿ ಯಾರು ಮರೆಯಲು ಸಾಧ್ಯವಿಲ್ಲ. ನಿಮ್ಮ ತಂದೆ ಕೊಡುತ್ತಿದ್ದ ಬೆಚ್ಚನೆ ಭಾವ, ಅವನ ಕಾಳಜಿಯುಕ್ತ ಅಪ್ಪುಗೆಗಳು ಹಾಗು ಅವರು ಸದಾ ನಿಮ್ಮ ಜೊತೆ ನಿಮ್ಮ ಬೆಂಬಲಕ್ಕೆ ನಿಲ್ಲುವರು ಎಂಬ ಸುರಕ್ಷಿತ ಭಾವನೆ ಬೇರೆ ಯಾರು ಕೊಡಲು ಸಾಧ್ಯವಿಲ್ಲ. ಇಡೀ ಜಗತ್ತೇ ನಿಮಗೆ ಎದುರಾಗಿ ನಿಂತರೂ, ನಿಮ್ಮ ಬೆನ್ನ ಹಿಂದೆ ನಿಂತು ಜಗತ್ತನ್ನೇ ಎದುರಿಸುತ್ತಿದ್ದರು ನಿಮ್ಮ ಅಪ್ಪ.ನೀವು ಅತಿಹೆಚ್ಚು ನಂಬಿದಂತಹ ಸಲಹೆಯ ಖಜಾನೆ ಹಾಗು ನಿಮ್ಮ ಬೆನ್ನೆಲುಬಾಗಿದ್ದ ನಿಮ್ಮ ಅಪ್ಪನನ್ನು ನೆನಪಿಸಿಕೊಳ್ಳುತ್ತೀರಿ.

೫. ಏನು ಕೆಲಸವಿಲ್ಲ

ನಿಮ್ಮ ಮೇಲೆ ಮನೆಕೆಲಸದ ಯಾವುದೇ ಜವಾಬ್ದಾರಿ ಇರಲಿಲ್ಲ. ಏಕೆಂದರೆ ಅವೆಲ್ಲವನ್ನು ಅಮ್ಮನೇ ನೋಡಿಕೊಳ್ಳುತಿದ್ದಳು. ಬಟ್ಟೆ ಒಗಿಯುವುದು, ಪಾತ್ರೆ ತೊಳೆಯುವುದು ಹಾಗು ಮದುವೆ ಆದಮೇಲೆ ಮಾಡಬೇಕಾದ ಇನ್ನು ಹಲವು ಕೆಲಸಗಳ ಯಾವುದೇ ಜವಬ್ದಾರಿ ನಿಮ್ಮ ಮೇಲೆ ಇರಲೇ ಇಲ್ಲ. ಮದುವೆ ಮುಂಚೆ ಎಲ್ಲಾ ಸಲೀಸಾಗಿತ್ತು, ಏಕೆಂದರೆ ಅವಾಗ ನೀವು ಕುಡಿದ ಕಾಫಿ ಲೋಟವನ್ನು ಜರಗಿಸುವಂತೆ ಯಾರು ತಾಕೀತು ಮಾಡುತ್ತಿರಲಿಲ್ಲ. ಮದುವೆ ಆದ ಮೇಲೆ ಕೆಲಸಗಳು ಸಾಗಬೇಕಂದರೆ ಅವುಗಳನ್ನು ನೀವೇ ಮಾಡಬೇಕು. ನಿಮ್ಮ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದನ್ನು ನೀವು ನೆನಪಿಸಿಕೊಳ್ಳುತ್ತೀರಿ.

೬. ಲೆಕ್ಕಾಚಾರ ಇಲ್ಲ, ಖರ್ಚಿಗೆ ಲೆಕ್ಕ ಇಲ್ಲ

“ಜವಾಬ್ದಾರಿ”-ಇದು ನಿಮಗೆ ಮದುವೆಯ ಮುನ್ನವೂ ಇತ್ತು ಎಂದು ನೀವು ಅಂಡುಕೊಂಡಿರುತ್ತೀರಿ. ಆದರೆ ನಿಜ ಹೇಳಬೇಕಂದರೆ ನಿಮಗೆ ಮದುವೆ ಆಗುವವರೆಗೆ ನಿಮಗೆ ನಿಜವಾದ ಜವಾಬ್ದಾರಿಗಳ ಅರಿವೇ ಇರುವುದಿಲ್ಲ. ಮನೆಯ ಬಜೆಟ್, ಕಟ್ಟಬೇಕಾದ ಬಿಲ್ ಗಳು, ಇವುಗಳ ಲೆಕ್ಕಾಚಾರದಲ್ಲೇ ನಿಮ್ಮ ದಿನ ಕಳೆದು ಹೋಗುತ್ತದೆ. ಖರ್ಚಿಗಾಗಿ ಎಷ್ಟು ದುಡ್ಡು ಎತ್ತಿಡಬೇಕು ಎಂದು ನಿರ್ಧರಿಸುವುದೇ ನಿಮಗೆ ತಲೆನೋವಗುತ್ತದೆ. ಆದರೆ ಅದನ್ನು ಮಾಡದೆಯೇ ಇರಲು ಆಗುವುದಿಲ್ಲ. ಒಂದೊಂದು ರುಪಾಯಿಗೂ ಲೆಕ್ಕ ಇಡದೆ ಖರ್ಚು ಮಾಡುತ್ತಿದ್ದ ದಿನಗಳು ನಿಮಗೆ ನೆನಪಾಗುತ್ತವೆ.

೭ . ನೀವು ನೀವಾಗಿರುವುದು

ಮದುವೆಯ ನಂತರ ಜೀವನದಲ್ಲಿ ನೀವು ನಿಮ್ಮ ಶ್ರಮಕ್ಕೂ ಮೀರಿ ಪ್ರತಿಯೊಂದು ಹೆಜ್ಜೆಯನ್ನು ತುಂಬಾ ಗಮನವಿಟ್ಟು ಯೋಚಿಸಿ ಇಟ್ಟರು, ಎಲ್ಲಾ ಸರಿ ಹೊಂದುವುದಿಲ್ಲ. ಇದು ನಿಮಗೆ ನಿಮ್ಮ ಮೇಲೆಯೇ ಬೇಸರ ತರುವಂತೆ ಮಾಡಬಹುದು. ನೀವು ನಿಮ್ಮ ಅತ್ತೆ ಮಾವ ಅಥವಾ ಗಂಡನನ್ನು ಖುಷಿಪಡಿಸಲು ನಿಮ್ಮತನವನ್ನೇ ಮರೆತು ಬಿಡುತ್ತೀರ. ಇದರೊಡನೆ ಬರುವ ಇನ್ನೊಂದು ಬೇಸರದ ಸಂಗತಿ ಅಂದರೆ ನಿಮ್ಮದೇ ಆದ ಹವ್ಯಾಸಗಳು, ಪ್ರತಿಭೆಗಳನ್ನು ನೀವಾಗಿಯೇ ಮರೆಮಾಚಿ ಬಿಡುತ್ತೀರ. ನೀವು ಮನಸೋಇಚ್ಚೆ ಬಾನಾಡಿಯಂತೆ ಹಾರಾಡುತ್ತಿದ್ದ ದಿನಗಳನ್ನು ಮರೆತುಬಿಡುತ್ತೀರ.

ಮದುವೆಯ ನಂತರ ಬದಲಾವಣೆ ಆಗುವುದು ನಿಜ, ಆದರೆ ಮುಂಚೆಯೇ ಹೇಳಿದಂತೆ ಬದಲಾವಣೆಯೇ ಜಗದ ನಿಯಮ. ನೀವು ನಿಮ್ಮ ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿಯನ್ನ ತುಂಬಾನೇ ನೆನಪಿಸಿಕೊಳ್ಳುತ್ತಿರಬಹುದು ಆದರೆ ಯಾವಾಗಲು ನೆನಪಿಡಿ, ನಿಮ್ಮ ತವರು ಮನೆ ಕೇವಲ ಒಂದು ಫೋನ್ ಕರೆ ಅಷ್ಟು ದೂರದಲ್ಲಿ ಇದೆ ಅಷ್ಟೇ !  

Leave a Reply

%d bloggers like this: