atte-maneyalli-manastaapagalillada-sukhajeevanakke-7-sootragalu-1

ಅತ್ತೆ-ಮಾವರ ಜೊತೆಗಿನ ಸಂಭಂಧ ಇನ್ನಿತರೆ ಸಂಬಂಧಗಳಂತೆ ಹಿತಕರ ಆಗಿರಬಹುದು ಅಥವಾ ಭಾರವೆನಿಸಬಹುದು. ಅವರು ಕೂಡ ನಿಮ್ಮ ಜೀವನದ ಒಂದು ಭಾಗವಾಗಿದ್ದು, ಅವರು ಹೇಳುವುದು ಎಲ್ಲಾ(ಕಡೇಪಕ್ಷ ಬಹಳಷ್ಟು) ನಿಮ್ಮ ಒಳಿತಿಗಾಗಿಯೇ. ನಿಮ್ಮ ಸಂಬಂಧ ಯಾವುದೇ ಮನಸ್ತಾಪಗಳಿಂದ ಕೂಡಿರದೆ, ಅನ್ಯೋನ್ಯತೆಯಿಂದ ಬಾಳಲು ಇಲ್ಲಿವೆ ೭ ಸೂತ್ರಗಳು :

೧. ನಕ್ಕು ಸುಮ್ಮನಾಗುವುದನ್ನು ಕಲಿಯಿರಿ

ಜಗತ್ತಿನ ಎಷ್ಟೊಂದು ತೊಂದರೆಗಳು ಒಬ್ಬ ವ್ಯಕ್ತಿ ನಕ್ಕು ಸುಮ್ಮನಾಗಿ ಬಿಟ್ಟರೆ ಬಗೆಹರಿದು ಹೋಗಿಬಿಡುತ್ತವೆ. ನಿಮಗೆ ಅಹಿತಕರ ಅನಿಸೋ ಯಾವುದಾದರು ಮಾತುಗಳು ನಿಮ್ಮ ಅತ್ತೆ-ಮಾವ ಆಡಿದ್ದಲ್ಲಿ ಅಥವಾ ಅಹಿತಕರ ಕೆಲಸ ಮಾಡಿದಾಗ, ಅದನ್ನು ತಿಳಿಯಾಗಿ ಸ್ವೀಕರಿಸಿ ಹಾಗು ನಕ್ಕು ಸುಮ್ಮನಾಗಿ ಬಿಡಿ. ಒಂದೇ ವಿಷಯದ ಬಗ್ಗೆ ತಲೆ ಕೆದೆಸಿಕೊಂಡು ಕೂತು, ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಯೋಚಿಸುತ್ತಾ ಇರುವುದು ನಿಮ್ಮನ್ನು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ನಿಶಕ್ತರನ್ನಾಗಿ ಮಾಡುತ್ತದೆ. ಯಾರಿಗೂ ಹೀಗಾಗುವುದು ಬೇಡ, ಅದು ಕೂಡ ಒಂದು ಚಿಕ್ಕ ವಿಷಯಕ್ಕಾಗಿ. ಹೀಗಾಗ, ಒಮ್ಮೆ ದೀರ್ಘ ಉಸಿರು ತೆಗೆದುಕೊಂಡು, ನಕ್ಕು ಸುಮ್ಮನಾಗಿಬಿಡಿ.

೨. ಕರುಣೆ ಇಂದ ಹಾಗು ಕೃತಜ್ಞರಾಗಿ ಇರಿ

ನೀವು ದುಡುಕಿ ಮಾಡುವ ಒಂದು ತಪ್ಪು ಕೆಲಸವನ್ನು ಮಾಸಲು ಅದಕ್ಕೆ ಪ್ರತಿಯಾಗಿ ೮ ಒಳ್ಳೆ ಕೆಲಸಗಳನ್ನು ಮಾಡಬೇಕೆಂದು ತಿಳಿದು ಬಂದಿದೆ. ದಯಾಳು ಮನೋಭಾವ ಹಾಗು ಕೃತಜ್ಞ ಮನೋಭಾವ ಬೆಳೆಸಿಕೊಳ್ಳುವುದು ಎಲ್ಲಾ ಸಮಯಕ್ಕೂ ಸೂಕ್ತ. ನಿಮ್ಮ ಅತ್ತೆ ಮಾವಂದಿರು ನಿಮಗೆಂದು ಮಾಡುವ ಪ್ರತಿ ಕೆಲಸಕ್ಕೂ ಕೃತಜ್ಞತೆ ಹೇಳಿ. ಇದು ಎಲ್ಲರಲ್ಲೂ ಒಳ್ಳೆ ಸ್ವಭಾವ ತರಲು ಉತ್ತಮ ವಾತಾವರಣ ಸೃಷ್ಟಿಸುತ್ತದೆ ಹಾಗು ಮನಸ್ತಾಪಗಳನ್ನು ತಡೆಯುತ್ತದೆ.

೩. ಮಾತಿನ ಮೇಲೆ ನಿಗಾ ಇರಲಿ

ಜನರು ಯಾವಾಗಲು ಇನ್ನೊಬ್ಬರ ಬಗ್ಗೆ ಮಾತಾಡುತ್ತಾರೆ ಹಾಗು ಜರಿಯುತ್ತಾರೆ. ನಿಮ್ಮ ಅತ್ತೆ-ಮಾವ ಇದರಿಂದ ಹೊರಗಡೆ ಇಲ್ಲ. ಹೀಗೆ ಆದಾಗ ನೀವು ಯಾವಾಗ ಮಾತಾಡಬೇಕು ಹಾಗು ಯಾವಾಗ ಮಾತಾಡಬಾರದು ಹಾಗು ಅವರ ಖಂಡನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಬಹಳಷ್ಟು ಪರಿಸ್ಥಿತಿಯಲ್ಲಿ ಇನ್ನೊಬ್ಬರ ಅಭಿಪ್ರಾಯ ಬದಲಾಯಿಸಲು ಸಾಧ್ಯವಿಲ್ಲ, ಅಂತ ಸಮಯದಲ್ಲಿ ಕೇಳಿಸಿಕೊಂಡರು ಇಲ್ಲದಂತೆ ಸುಮ್ಮನಾಗಿಬಿಡಿ.

೪. ಸಂವಹನವೇ ಕೀಲಿಕೈ

ಪ್ರತಿ ಸಂಬಂಧದ ಆಧಾರಸ್ತಂಭವೇ ಸಂವಹನ. ಅಂದರೆ ಒಬ್ಬರೊಡನೆ ಒಬ್ಬರು ಮಾತಾಡುವುದು. ನೀವು ನಿಮ್ಮ ಪತಿಯೊಡನೆ ಅಥವಾ ಅತ್ತೆ ಮಾವರೊಡನೆ ಮಾತಾಡದೆ ಇದ್ದರೆ, ಇದು ನಿಮ್ಮ ಸಂಬಂಧದಲ್ಲಿ ಬಿರುಕುಗಳನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ನೀವು ಹಾಗೆಯೇ ಬಿಟ್ಟರೆ, ಈ ಬಿರುಕುಗಳು ನಿಮ್ಮ ಸಂಬಂಧಗಳನ್ನೇ ಮುರಿದು ಬಿಡುತ್ತವೆ. ಇದೇ ಕಾರಣಕ್ಕಾಗಿಯೇ ನಿಮಗೆ ಯಾವುದಾದರು ತೊಂದರೆ ಎದುರಾದೊಡನೆ, ನಿಮ್ಮ ಅತ್ತೆ-ಮಾವರೊಡನೆ ಕೂತು ಒಳ್ಳೆ ರೀತಿಯಲ್ಲಿ ಹೇಳಿ ಬಗೆಹರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ತೊಂದರೆಗಳ ಮೂಟೆಯನ್ನ ಹೊರುವುದು ತಪ್ಪುತ್ತೆ ಹಾಗು ಸಂಬಂಧಗಳು ಗಟ್ಟಿಯಾಗುತ್ತವೆ.

೫. ಇತಿ ಮಿತಿ ಇರಲಿ

ದಿನದ ಕೊನೆಯಲ್ಲಿ ನಿಮ್ಮ ಸಂಸಾರ ಎಂದು ಬಂದರೆ, ನಿಮ್ಮ ಅತ್ತೆ-ಮಾವರ ಪಾತ್ರ ಅದರಲ್ಲಿ ಎಷ್ಟು ಇರಬೇಕೆಂದು ನಿರ್ಧರಿಸುವರು ನೀವೇ. ಅವರ ಭಾಗವಹಿಸುವಿಕೆಯು ಎಷ್ಟಿರಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ನಿಮ್ಮ ಅತ್ತೆ-ಮಾವ ನಿಮ್ಮ ಪ್ರತಿಯೊಂದು ವಿಷಯದಲ್ಲೂ ತುಂಬಾನೇ ಮೂಗು ತೋರಿಸುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಕೂಡಲೇ ಅವರಿಗೆ ಅವರ ಇತಿ ಮಿತಿಯ ಬಗ್ಗೆ ಅರಿವು ಮಾಡಿಸಿ. ಹಾಗು ಮುಖ್ಯವಾಗಿ, ಇದನ್ನು ಮಾಡುವಾಗ ಮೊಂಡುವಾದ ಮಾಡದೆ ಸಮಾಲೋಚಿಸಿ ಹೇಳಬೇಕು. ನಿಮ್ಮ ಅತ್ತೆ-ಮಾವ ನಿಮ್ಮ ಪತಿಯ ತಂದೆ-ತಾಯಿ, ಹಾಗಾಗಿ ಅವರು ಹೇಳುವುದ ಅವರ ಮಗನ ಒಳಿತಿಗಾಗಿಯೇ ಎಂಬುದನ್ನು ನೆನಪಿಡಿ.

೬. ಕೇಳಿಸಿಕೊಳ್ಳಿ

ಬಹಳಷ್ಟು ವೇಳೆ ನಾವುಗಳು ಅತ್ತೆ ಮಾವ ನೀಡುವ ಸಲಹೆಗಳನ್ನು ಅಲ್ಲಗಳೆದು ಬಿಡುತ್ತೇವೆ. ಇದಕ್ಕೆ ಕಾರಣ ಎಂದರೆ, ನಾವು ಅತ್ತೆ-ಮಾವ ಹಳೆಯ ಕಾಲದವರಾಗಿದ್ದು,ಅವರ ಯೋಚನಲಹರಿಯು ಹಳೆಯದಾಗಿದ್ದು, ಈಗಿನ ಕಾಲಕ್ಕೆ ಸರಿಹೊಂದುವುದಿಲ್ಲ ಎಂಬ ತಪ್ಪು ಗ್ರಹಿಕೆ. ನಿಜ ಹೇಳಬ್ಕೆಂದರೆ, ಹಲವು ಬಾರಿ ಅವರು ನೀಡುವ ಸಲಹೆಗಳು ನಮಗೆ ಒಳಿತನ್ನು ಮಾಡುತ್ತವೆ. ಅಕಸ್ಮಾತ್, ಅವರ ಸಲಹೆಗಳು ಹಳೆ ಕಾಲದ್ದು ಎನಿಸಿದರು ಅಥವಾ ತುಂಬಾ ಸಣ್ಣದು ಎನಿಸಿದರೂ, ಕೇಳಿಸಿಕೊಳ್ಳುವುದಕ್ಕೆ ನಾವೇನು ಕಳೆದುಕೊಳ್ಳಬೇಕಿಲ್ಲ. ನೀವು ಕೇಳಿಸಿಕೊಂಡರೆ ಅದು ಅವರ ಸಲಹೆಗೆ ನೀವು ಬೆಲೆ ಕೊಡುತ್ತಿದೀರ ಎಂದು ಅವರಿಗೆ ತಿಳಿಯುತ್ತದೆ ಹಾಗು ಮುಂದೆ ಅವರು ನೀಡುವ ಸಲಹೆಗಳು ನಿಮ್ಮ ಸಹಾಯಕ್ಕೆ ಬರಬಹುದು.

೭. ಸಂಭಾವಿತರಾಗಿ

ವಿಷಯಗಳನ್ನು ನೀವು ನಿಮ್ಮ ಅತ್ತೆ-ಮಾವರ ದೃಷ್ಟಿಕೋನದಿಂದಲೂ ನೋಡಿ. ಅವರಿಗೆ ಬೇಕಾಗಿರುವುದು ಕೇವಲ ಅವರ ಮಗನ ಜೀವನ ಚೆನ್ನಗಿರಬೇಕೆಂದು ಹಾಗು ಅವರು ತಮ್ಮ ಮಗನ ಜೀವನದ ಪ್ರಮುಖ ಭಾಗವಾಗಿರಬೇಕು ಎಂಬುದಷ್ಟೇ. ಸಣ್ಣ ಪುಟ್ಟ ಬದಲಾವಣೆಗಳು ನಿಮಗೆ ಇಷ್ಟವಾಗದೆ ಇದ್ದರೂ ಅವುಗಳನ್ನು ಸಹಿಸಿಕೊಂಡು ಒಗ್ಗಿಕೊಳ್ಳಲು ಪ್ರಯತ್ನಿಸಿ, ತೊಂದರೆ ತುಂಬಾ ದೊಡ್ಡದು ಇದ್ದಾರೆ ಅದನ್ನು ಸಂಭಾವಿತರಾಗಿ, ಪಕ್ವತೆಯಿಂದ ಬಗೆಹರಿಸಿ. ಇದು ಕಷ್ಟವೆನಿಸಬಹುದು ಆದರೆ ಕೆಲವೊಂದು ಬಾರಿ ನಾವು ದೊಡ್ಡವರಾಗಿ, ಇನ್ನೊಬ್ಬರ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು. ಆಗ ನಾವು ಸಂತೋಷವಾಗಿ ಇರುತ್ತೇವೆ.   

Leave a Reply

%d bloggers like this: