ee-chaliyalli-sangaatiyodane-maadabekaada-5-karyagalu-1

ಪ್ರಣಯದ ಹಕ್ಕಿಗಳಿಗೆ ಈಗಿರುವ ಹವಾಮಾನಕ್ಕಿಂತ ಹಿತಕರವಾದ ಹವಾಮಾನ ಮತ್ತೊಂದು ಸಿಗಲಿಕ್ಕಿಲ್ಲ ಅಂದುಕೊಳ್ಳುತ್ತೀನಿ.  ರಾಜಕುಮಾರ್ ಕಾಲದಿಂದ ಹಿಡಿದು ಮುಂಗಾರು ಮಳೆ ಕಾಲ ದಾಟಿ ಇನ್ನೂ ಮುಂಬರುವ ಪೀಳಿಗೆಗಗಳು ಕೂಡ ಪ್ರೀತಿಯಲ್ಲಿ ಬಿದ್ದಾಗ ಈ ಹವಾಮಾನದಲ್ಲೇ ಪ್ರಣಯಗೀತೆ ಹಾಡುವುದು.  ಬೆಚ್ಚನೆ ಮನೆಯಿರಲು , ವೆಚ್ಚಕ್ಕೆ ಹೊನ್ನಿರಲು, ಇಚ್ಚೆಯನರಿತು ನಡೆವ ಸತಿ ಇರಲು ಸ್ವಗ೯ಕ್ಕೆ ಕಿಚ್ಚು ಹಚ್ಚೆಂದ ಸವ೯ಜ್ಞ! ಇವೆಲ್ಲದರ ಕಿರೀಟಕ್ಕೆ ಇನ್ನೊಂದು ರತ್ನವೊಂದು ಸೇರಿದರೆ ಅದು ಇನ್ನೂ ಅಮೋಘ! ಅದುವೇ,  ನಮ್ಮೂರಿನ ಚುಮು ಚುಮ ಚಳಿ. ಇಂತಹ ಹವಾಮಾನದಲ್ಲಿ ನಿಮ್ಮ ಸಂಗಾತಿಯೊಡನೆ ಮಾಡಬಹುದಾದ ಕೆಲಸಗಳು ಇಲ್ಲಿವೆ :

೧. “ಕಾಣದ ನಾಡಲ್ಲಿ, ಕೇಳದ ಊರಲ್ಲಿ, ಕೈ ಹಿಡಿದು ಹೋಗೋಣ ಕಳೆದು” !

ಪ್ರಣಯದ ಪ್ರಯಾಣ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ! ನಿಮ್ಮ ದೈನಂದಿನ ಜಂಜಾಟವೆಲ್ಲ ಮರೆತು, ನೀವಿಬ್ಬರೇ ಜೊತೆಗೂಡಿ ಒಂದು ರೈಡ್ ಹೋದರೆ ಪ್ರಯಾಣದ ಉದ್ದಕ್ಕೂ ನೀವಿಬ್ಬರು ಹರಟೆ ಹೊಡೆಯೋದಲ್ಲದೆ ನಿಮ್ಮ ಅಂತರಾಳವನ್ನು ಕೂಡ ಬಿಚ್ಚಿಡಲು ಸೂಕ್ತ ಸಮಯ! ಒಳ್ಳೆಯ ಹವಾಮಾನ, ಒಳ್ಳೆಯ ಮೂಡ್, ನೀವು ಯಾವುದಾದರು ಹೊಸ ವಿಷಯಕ್ಕೆ ಪೀಠಿಕೆ ಹಾಕಲು ಇದು ಒಳ್ಳೆಯ ಸಮಯ!

೨. “ಒಂದು ಕಾಫಿಯ ಕಥೆ”

ಜಿನಿ ಜಿನಿ ಮಳೆ, ತಂಪು ಗಾಳಿ, ಒಂದು ಜೋಡಿ! ಇವುಗಳನ್ನು ಸಂಪೂರ್ಣ ಮಾಡಲು ಬೇಕಾಗಿರುವುದು ಪ್ರೀತಿಯಿಂದ ಮಾಡಿದ ಬಿಸಿ ಬಿಸಿ ೨ ಲೋಟ ಕಾಫಿ! ಅದರೊಂದಿಗೆ ಬಿಸಿ ಬಿಸಿ ಪಕೋಡ ಇದ್ದರೆ ಇನ್ನೂ ಚೆಂದ. ಹರಟೆ ಇರಲಿ ಅಥವ ತಲೆಹರಟೆ ಇರಲಿ, ಸಮಯ ಖುಷಿಯಿಂದ ಕಳೆದರೆ, ಅದು ವ್ಯರ್ಥವಾದ ಸಮಯ ಅಲ್ಲ !

೩. “ಇದುವೇ ನಿನ್ನೊಂದಿಗೆ ಏಳು ಹೆಜ್ಜೆ, ಹಾಕುವೆ ಈ ತಾಳಕ್ಕೆ ನಿನ್ನೊಂದಿಗೆ ೨ ಹೆಜ್ಜೆ”

ಹೌದು! ಡಾನ್ಸ್ ಮಾಡಲಿಕ್ಕೆ ನಿಮ್ಮ ಹುಡುಗ ಯಶ್ ಆಗಬೇಕಿಲ್ಲ ಅಥವಾ ನಿಮ್ಮ ಹುಡುಗಿ ರಾಧಿಕಾ ಆಗಬೇಕಿಲ್ಲ! ನಿಮಗೆ ಕುಣಿಯಲು ಬರದಿದ್ದರೂ ಪರವಾಗಿಲ್ಲ, ನೆಲ ಡೊಂಕು ಅನ್ನಬಾರದು ಅಷ್ಟೇ ! ಅಂದರೆ, ನೀವು ಹಾಕಿದ್ದೆ ಹೆಜ್ಜೆ ಆಗಲಿ, ನೀವು ಕೈ ಕೈ ಹಿಡಿದು ನಡೆಯುವುದೇ ಕುಣಿತವಾಗಲಿ, ನಿಮ್ಮ ಮನಸ್ಸು ಬಿಚ್ಚಿ ನಿಮ್ಮ ಸಂಗಾತಿಯೊಡನೆ ಖುಷಿ ಪಡಿ. ಸಂಶೋಧನೆ ಪ್ರಕಾರ ತಿಳಿದು ಬಂದಿರುವುದು ಏನೆಂದರೆ ಜೊತೆಗೂಡಿ ಕುಣಿಯುವ ದಂಪತಿಗಳಲ್ಲಿ ಹೆಚ್ಚಿನ ಸಮಯದವರೆಗೂ ಪ್ರೀತಿ ಮಾಸುವುದಿಲ್ಲವಂತೆ!

೪. “ಸಂತೆಗೆ ಹೋಗೋಣ ಬಾ, ಸಿನಿಮಾ ಟೆಂಟ್ ಅಲ್ಲಿ ಕೂರೋಣ ಬಾ”

ವಾರಾಂತ್ಯ, ಏನು ಕೆಲಸವಿಲ್ಲ, ನಿಮ್ಮ ನೆಚ್ಚಿನ ನಟನ ಸಿನಿಮಾ ಈ ವಾರ ರಿಲೀಸ್ ಆಗಿದೆ. ಮತ್ತೆ ಯಾಕೆ ಮನೆಯಲ್ಲೇ ಕಾಲಹರಣ?! ಬಟ್ಟೆ ಹಾಕಿಕೊಂಡು ಸಿದ್ಧರಾಗಿ, ಗಾಡಿ ಹೊರಗಡೆ ತೆಗೆಯಿರಿ ಹಾಗು ಚಿತ್ರಮಂದಿರದ ಕಡೆ ನಡೆಯಿರಿ. ಪಾಪ್ಕಾರ್ನ್ ತಿನ್ನುತ್ತಾ ನಿಮ್ಮ ಸಂಗಾತಿಯೊಡನೆ ಸಿನಿಮಾ ನೋಡುತ್ತಿದ್ದರೆ, ಎಲ್ಲಾ ಸಿನಿಮಾನು ನಿಮ್ಮದೇ ಕಥೆ ಅಲ್ಲವ ಇದು ಅನ್ನಿಸಲು ಶುರು ಆಗುತ್ತದೆ !

೫. “ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ”

ಈ ಚಳಿಯಲ್ಲಿ ಕೆಲಸ ಮಾಡೋದಕ್ಕೆ ಯಾರಿಗೆ ತಾನೇ ಇಷ್ಟ ಆಗುತ್ತದೆ ಹೇಳಿ? ಅದೇ ಒಳ್ಳೆ ಊಟ ಸಿಕ್ಕರೆ ಬಿಡುವವರು ಯಾರು ಹೇಳಿ? ಈ ದಿನ ನಿಮ್ಮ ಸಂಗಾತಿಯೊಡನೆ ಒಂದು ಒಳ್ಳೆ ರೆಸ್ಟೋರೆಂಟ್ ಗೆ ಹೋಗಿ, ಹೊಟ್ಟೆ ಬಿರಿಯುವಂತೆ ತಿನ್ನಿ. ಏಕೆಂದರೆ ಹೊಟ್ಟೆ ತುಂಬಿದ್ದರೆ, ಹ್ರುದುಯವು ತುಂಬಿ ಬರುತ್ತದೆ!   

Leave a Reply

%d bloggers like this: