obba-tandeyinda-tanna-magalige-tereda-patra-2

ನನ್ನ ಮುದ್ದು ಪುಟ್ಟಿ,

ನಮ್ಮನೇಲಿ ಇರೋ ಹಳೆ ಬೀರುವಿನ ಸೀಕ್ರೆಟ್ ಕೋಣೆಗಳಲ್ಲಿ ಇಟ್ಟಿರೋ ಎಷ್ಟೊಂದು ಬಾಕ್ಸ್ ಗಳ ಒಂದರಲ್ಲಿ, ಒಂದು ಫೋಟೋ ಆಲ್ಬಮ್ ಇದೆ. ಆ ಆಲ್ಬಮ್ಮಿನಲ್ಲಿ ನಿನ್ನ ಮೊದಲ ವರ್ಷದಲ್ಲಿ ತೆಗೆದ ನನ್ನ ಹಾಗು ನಿನ್ನ ಫೋಟೋಗಳಿವೆ. ನಾನು ನೋಡಿರುವಂತ ಅತ್ಯಂತ ಸುಂದರ ಫೋಟೋಗಳು ಅವು. ಆದರೆ, ಅದರಲ್ಲಿರೋ ಒಂದು ಫೋಟೋ ನನಗೆ ತುಂಬಾ ನೆನಪಿದೆ, ಆ ನೆನಪುಗಳು ನನ್ನ ಕಣ್ಣಲ್ಲಿ ಇನ್ನೂ ಹಚ್ಹ ಹಸಿರಾಗಿವೆ. ಆ ಫೋಟೋದಲ್ಲಿ ನೀನು ಪುಟ್ಟ ಬೆಕ್ಕಿನ ಮರಿ ಥರ ಇದ್ದೆ. ನನ್ನ ಅಂಗೈ ಇಂದ ಮೊಣಕೈವರೆಗಿನ ಜಾಗದಲ್ಲೇ ನೀನು ಹಿಡಿಸುತ್ತಿದ್ದೆ ಆಗ! ಅಲ್ಲಿ ಇದ್ದೆ ನೀನು, ನನ್ನ ಕೈಗಳಲ್ಲಿ ಮಲಗಿಕೊಂಡು, ಬಾಯಿಯೇ ಬಿಡದಂತೆ ಸಣ್ಣ ಆಕಳಿಕೆ ಮಾಡುತ್ತಾ. ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೂ ನೋಡಿದಂತ ಅತ್ಯಂತ ಮುದ್ದಾದ ದೃಶ್ಯವೇ ಅದು.

ನೀನು ಆವಾಗಿನಿಂದ ತುಂಬಾನೇ ಬೆಳೆದಿದ್ದೀಯ. ಬೆಳೆಯುತ್ತಾ ಬೆಳೆಯುತ್ತಾ (ಅದು ಕೂಡ ಅಷ್ಟು ವೇಗವಾಗಿ), ನೀನು ನಿನ್ನ ಅಮ್ಮನಂತೆಯೇ ದೃಢ, ವಿಶ್ವಾಸವುಳ್ಳ, ಸ್ವಾವಲಂಬಿ ಹಾಗು ಒಂದು ಸುಂದರ ಯುವತಿ ಆಗುತ್ತಿದ್ದೀಯ. ಇದು ಎಲ್ಲರು ಹೇಳೋ ಮಾತು ಅಂತ ಗೊತ್ತು, ಆದರೆ ಇದು ನಿಜ. ನೀನೆ ನನ್ನ ಕಣ್ಣು, ನನ್ನ ರತ್ನ.

ನೀನು ಈ ವರ್ಷ ನಿನ್ನ ೨೦ನೆ ವಸಂತಕ್ಕೆ ಕಾಲಿಡುತ್ತಿದ್ದೀಯ. ಈ ಸಂದರ್ಭದಲ್ಲಿ ನಾನು ನಿನಗೆ ಏನು ನೀಡಬೇಕು ಎಂಬ ಹುಳ ನನ್ನ ತಲೆ ಹೊಕ್ಕಾಗಿದೆ. ಆದರೆ ನನಗೆ ಮನವರಿಕೆ ಆಗಿದ್ದು ಏನು ಅಂದರೆ, ನಾನು ನಿನಗೆ ಕೊಡಲು ಉಳಿದಿರುವ ಒಂದೇ ವಸ್ತು ಅಂದರೆ ಅದು ದೂರದೃಷ್ಟಿ. ಹಾಗಾಗಿ ಕಂದಮ್ಮ, ನೀನು ಈ ಪತ್ರದ ಮುಂದಿನ ಭಾಗ ಓದಲಿಕ್ಕೆ ತಾಯಾರಾಗು, ಏಕೆಂದರೆ ಸ್ವಲ್ಪ ಬುದ್ಧಿ ಮಾತುಗಳು ಈಗ ನಿನ್ನೆಡೆಗೆ ಹರಿದು ಬರ್ತಾ ಇವೆ !

ನಿನಗೆ ಎಲ್ಲರು ಯಾವಾಗಲು ಹೇಳುವ ಮಾತೊಂದಿಗೆ ನನ್ನ ಈ ಬುದ್ಧಿವಾದ ಶುರು ಮಾಡ್ತೇನೆ. ಅದುವೇ “ನೀನು ಯಾರೆಂಬುದನ್ನು ಮರೆಯದಿರು”! ನನಗೆ ಇನ್ನೂ ನೆನಪಿದೆ, ನೀನು ಚಿಕ್ಕವಳಿದ್ದಾಗ ಈ ಮಾತು ನಿನಗೆ ಹೇಳಿದಾಗಲೆಲ್ಲಾ ನೀನು ಒಂದೇ ಪ್ರಶ್ನೆ ಕೇಳುತ್ತಿದ್ದೆ “ನಾನು ನಾನಾಗಿ ಇರದೇ, ಬೇರೆಯವರಾಗಲು ಹೇಗೆ ಸಾಧ್ಯ? ” ಎಂದು. ಇದಕ್ಕೆ ಉತ್ತರ ನಿನಗೆ ಯಾರಾದರು ನೀಡಿದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇವತ್ತು ನಾನು ಹೇಳುತ್ತಿದ್ದೇನೆ ಕೇಳು. ನೀನು ಈಗ ಯಾರು ಆಗಿದೆಯೋ, ನಿನ್ನೊಳಗೆ ಇರುವ ಆ ವ್ಯಕ್ತಿಯು, ಅಂತರಾಳದಲ್ಲಿ, ಅಂದರೆ ಎಲ್ಲಿ ನೀನು ನಿನ್ನ ಯೋಚನೆಗಳು ಹಾಗು ನಂಬಿಕೆಗಳನ್ನು ಇಡುವೆಯೋ, ನಿನ್ನ ಅಭಿಪ್ರಾಯಗಳು ಹಾಗು ಗುಟ್ಟುಗಳನ್ನು ಇಡುವೆಯೋ, ಅಲ್ಲಿಗೆ ಯಾರಿಗೂ ಪ್ರವೇಶ ನೀಡಬೇಡ! ಅದುವೇ ನೈಜ್ವ್ಯವಾದ, ಒಳ್ಳೆಯ, ಶುದ್ಧವಾದ, ಅರ್ಥ ಮಾಡಿಕೊಳ್ಳುವ, ಕರುಣೆಯುಳ್ಳ ನೀನು. ಈ ವ್ಯಕ್ತಿಯನ್ನೇ ನೀನು ಜಗತ್ತಿನೊಡನೆ ಬೆರೆಯಲು ಮುಚ್ಚಿಡುವುದು. ಇದನ್ನು ತಮ್ಮ ಇಚ್ಚೆಗೆ ಬದಲಾಯಿಸುವಂತ ಅಥವ ಇದರ ಮೇಲೆ ಪರಿಣಾಮ ಬೀರುವಂತ ಶಕ್ತಿಯನ್ನು ಯಾರಿಗೂ ನೀಡಬೇಡ!

ಮುಂದೆ, ನನಗೆ ನೀನು ನಿನ್ನ ಜೀವನವನ್ನು ಒಪ್ಪಿಕೊಂಡು ಅನುಭವಿಸಬೇಕು. ಇದನ್ನು ನಾನು ನಿನಗೆ ತುಂಬಾ ಗಂಭೀರವಾಗಿ ಹೇಳುತ್ತಿದ್ದೀನೆ. ಈ ತಪ್ಪನ್ನು ನಾನು ನಿನ್ನ ವಯಸ್ಸಿನಲ್ಲಿ ಮಾಡಿದ್ದೆ. ನಾನು ಜೀವನದ ಕಷ್ಟಗಳನ್ನು ಯಾವಾಗಲೂ ಕೆಟ್ಟ ದೃಷ್ಟಿಯಲ್ಲೇ ನೋಡುತ್ತಿದ್ದೆ. ಅದನ್ನು ಈಗ ಮೆಲಕು ಹಾಕಿದರೆ, ನಾನು ಎಂತ ಮೂರ್ಖನಿದ್ದೆ ಎಂದು ಅನಿಸುವುದು. ಇವೆಲ್ಲಾ ಹೇಳಲಿಕ್ಕೆ ಚೆಂದ ಆದರೆ ಮಾಡಲಿಕ್ಕೆ ತುಂಬಾ ಕಷ್ಟ ಎಂದು ನನಗೂ ಗೊತ್ತು. ಆದರೆ, ಜೀವನವು ನಿನ್ನ ಮುಂದೆ ಏನೇ ಇಟ್ಟರು, ಅದನ್ನು ಸ್ವೀಕರಿಸಿ ಮುಂದೆ ನಡೆಯಲು ನಿನಗೆ ಸಾಧ್ಯವಾದಷ್ಟು ಪ್ರಯತ್ನ ಮಾಡುವುದೊಂದೇ ನನಗೆ ಬೇಕಾಗಿರುವುದು. ನಿನಗೆ ಏನೇ ಎದುರಾದರು ಅದನ್ನು ನಗು ನಗುತ್ತಾ ಸಂಭಾಲಿಸು. ಅವಕಾಶಗಳು ಯಾವಾಗಲು ನಿನಗೆ ಕಾಯುತ್ತಿರುತ್ತವೆ ಪುಟ್ಟ, ನೀನು ಅವುಗಳಿಗೆ ಮುಕ್ತವಾಗಿ ಇರಬೇಕಷ್ಟೇ.

ಕೊನೆಯದಾಗಿ, ನನಗೆ ನೀನು ಕಲಿಯುತ್ತಾ ಇರಬೇಕು. ಅದು ಏನೇ ಇರಲಿ, ನೀನು ಎಂದಿಗೂ ನಾನು ಸಾಕದಷ್ಟು ಕಲಿತಿದ್ದೇನೆ ಎಂದು ಅಂದುಕೊಳ್ಳಲೇಬಾರದು. ನನ್ನಿಂದ ಕಲಿ, ಅಮ್ಮನಿಂದ ಕಲಿ, ದಾರಿಯಲಿ ಕಂಡವನಿಂದ ಕಲಿ, ಪರಿಸರದಿಂದ ಕಲಿ, ಒಟ್ಟಿನಲ್ಲಿ ಕಲಿಯುವುದನ್ನು ಮಾತ್ರ ನಿಲ್ಲಿಸಬೇಡ. ನೀನು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯು, ನೀನು ನೋಡುವ ಪ್ರತಿಯೊಂದು ವಿಷಯವು ನಿನ್ನ ಜೀವನಕ್ಕೆ ಬೇಕಾಗಿರುವುದು ಏನಾದರನ್ನು ಕಲಿಸುತ್ತದೆ.

ಕಳೆದ ಈ ೨೦ವರ್ಷಗಳು, ನನ್ನ ಜೀವನ ಅತ್ಯಂತ ಆನಂದಮಯ ಕಾಲ. ಅದಕ್ಕೆ ಕಾರಣ ನೀನು. ನನ್ನ ಸುಂದರ ಮಗಳೇ, ನೀನು ಸದಾಕಾಲ ನನ್ನ ಹೃದಯದಲ್ಲಿ ಇದ್ದೆ ಇರುತ್ತೀಯ.

ಪ್ರೀತಿಯಿಂದ,

ಅಪ್ಪ

ಟಿಪ್ಪಣಿ – ನೀನು ಎಷ್ಟೇ ದೊಡ್ಡವಳಾದರು, ನನಗೆ ನೀನು ಇನ್ನೂ ಪುಟ್ಟ ಚಿನ್ನಿಯೇ!

Leave a Reply

%d bloggers like this: