ಈ ಕಠಿಣ ಬೇಸಿಗೆಯ ಬಿಸಿಲನ್ನು ಗರ್ಭಿಣಿಯರು ಇರಲಿ, ಯಾರ ಕೈಯ್ಯಿಂದಲೂ ಸಹಿಸಲಾಗುವುದಿಲ್ಲ. ನೀವು ಗರ್ಭಿಣಿಯಾದಾಗ ಇರುವುದಕ್ಕಿಂತ ಹೆಚ್ಚು ಬಿಸಿ ಅನಿಸುತ್ತಿರುತ್ತದೆ. ಇದು ಚಳಿಗಾಲದಲ್ಲಿ ಒಳ್ಳೆಯದು ಅನಿಸಿದರೆ, ಬೇಸಿಗೆಯಲ್ಲಿ ಉಸಿರುಗಟ್ಟಿದಂತೆ ಭಾಸವಾಗುವಂತೆ ಮಾಡುತ್ತದೆ.
ಬೇಸಿಗೆಯ ಕಾಲದಲ್ಲಿ ನೀವು ಆರಾಮಾಗಿರಲು ಏನು ಮಾಡಬೇಕೆಂದು ಕೆಲವು ಸಲಹೆಗಳನ್ನು ನೀಡಿದ್ದೇವೆ ಓದಿ
೧. ನೈಸರ್ಗಿಕ ವಸ್ತ್ರಗಳು
ಬೆವರುವುದು ಸಾಮಾನ್ಯ. ಆದರೆ ಗರ್ಭಿಣಿಯಾದಾಗ ರಾತ್ರಿ ಹೊತ್ತು ಬೆವರುವುದು ತೊಂದರೆಯಾಗಿ ಪರಿಣಮಿಸಬಹುದು. ನೀವು ತುಂಬಾ ಬೆವರಿ ಅಂಟಂಟು ಆಗುವುದನ್ನು ತಪ್ಪಿಸಬೇಕೆಂದರೆ ನೀವು ನೈಸರ್ಗಿಕ ವಸ್ತ್ರಗಳನ್ನು ಧರಿಸಬೇಕು. ಸಿಂಥೆಟಿಕ್ ಮೆಟೀರಿಯಲ್ ಇಂದ ಕೂಡಿದ ತಲೆದಿಂಬು ಬದಲು ಹತ್ತಿಯ ತಲೆದಿಂಬು ತೆಗೆದುಕೊಳ್ಳಿ. ಅಲ್ಲದೆ ಕಾಟನ್ ಇಂದ ತಯಾರಿಸಿದ ಬಟ್ಟೆಯನ್ನೇ ರಾತ್ರಿ ಮಲಗುವಾಗ ಧರಿಸಿ.
೨. ಜಲೀಕರಣ ಯಾವಾಗಲು ಅತ್ಯಗತ್ಯ
ವೈದ್ಯರು ನಮಗೆ ಬೇಸಿಗೆಯ ಕಾಲದಲ್ಲಿ ಯಾವಾಗಲು ನಿಗದಿತ ಪ್ರಮಾಣದ ನೀರನ್ನು ಕುಡಿಯಲೇ ಬೇಕೆಂದು ಒತ್ತಿ ಒತ್ತಿ ಹೇಳುತ್ತಾರೆ, ಗರ್ಭಧಾರಣೆ ವೇಳೆಯಲ್ಲಂತೂ ಇದು ಇನ್ನೂ ಮುಖ್ಯ.
ಬಿಸಿ ಅನಿಸುತಿದೆಯೇ? ಲೀಟರ್ ಗಟ್ಟಲೆ ನೀರನ್ನು ಕುಡಿಯಿರಿ ಇದು ಕೇವಲ ನಿಮ್ಮನ್ನು ನಿರ್ಜಲೀಕರಣ ಆಗುವುದರಿಂದ ತಪ್ಪಿಸುವುದಷ್ಟೇ ಅಲ್ಲದೆ ನಿಮ್ಮ ದೇಹವನ್ನು ತಣ್ಣಗೆ ಇಟ್ಟಿರುತ್ತದೆ. ನಿಮಗೆ ನೀರನ್ನು ಹಾಗೆ ಕುಡಿಯಲು ಇಷ್ಟವಾಗದೆ ಇದ್ದರೆ ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿಕೊಂಡು ಕುಡಿಯಿರಿ ಅಥವಾ ಎಳನೀರಿನ ಮೊರೆ ಹೋಗಿ. ಅಲ್ಲದೆ, ಸಕ್ಕರೆ ಅಂಶವಿರುವಂತಹ ಹಾಗು ಕೆಫೈನ್ ಇರುವಂತಹ ಪಾನೀಯಗಳನ್ನು ಕುಡಿಯಬೇಡಿ.
೩. ಊದಿಕೊಂಡಿರುವ ಪಾದಗಳು ಹಾಗು ಕೈಗಳಿಗೆ ಕಾಳಜಿ ಬೇಕು
ಬೇಸಿಗೆಯ ಬಿಸಿ ನಿಮ್ಮ ಪಾದಗಳನ್ನು ಹಾಗು ಕೈಗಳನ್ನು ಊದಿಕೊಳ್ಳುವಂತೆ ಮಾಡುತ್ತವೆ. ಹಾಗಾಗಿ ಇವುಗಳ ಕಾಳಜಿವಹಿಸುವುದು ತುಂಬಾ ಮುಖ್ಯ. ನೀವು ಧರಿಸುವ ಎಲ್ಲಾ ಉಂಗುರಗಳನ್ನು ತೆಗೆದಿಡಿ ಹಾಗು ನಿಮಗೆ ಅಗತ್ಯ ಇರುವುದಕ್ಕಿಂತ ಒಂದು ಅಳತೆ ದೊಡ್ಡದಾದ ಪಾದರಕ್ಷೆಗಳನ್ನು ಖರೀದಿಸಿ. ದೇಹದಲ್ಲಿ ನೀರಿನಾಂಶ ಕಮ್ಮಿ ಆಗದಿರಲು ಉಪ್ಪಿನಾಂಶ ಇರುವ ಆಹಾರಗಳನ್ನ ಸೇವಿಸಬೇಡಿ. ಅಲ್ಲದೆ ನಿಮ್ಮ ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ನೆಲದೆ ಮೇಲೆ ಊರಬೇಡಿ. ಊದಿದ ಜಾಗಗಳಿಗೆ ಆರ್ದ್ರಕಾರಿ (moisturizer)ಗಳನ್ನ ಉಪಯೋಗಿಸಿ. ಇದು ನಿಮ್ಮ ಕಾಲು ತೇವಾಂಶದಿಂದ ಕೂಡಿರುವಂತೆ ಮಾಡುವುದಲ್ಲದೆ ಊದುವುದು ಕಮ್ಮಿ ಮಾಡುತ್ತದೆ.
೪. ನಿಮ್ಮ ಫ್ಯಾನ್ ಗೆ ನೀವು ಫ್ಯಾನ್ ಆಗಿ
ಫ್ಯಾನ್ ಗಳು ಬೇಸಿಗೆ ಕಾಲದಲ್ಲಿ ತುಂಬಾನೇ ಉಪಕಾರಿಯಾಗಿದ್ದು ಬಿರುಬಿಸಿಲ ಬೇಗೆಯಿಂದ ನೀವು ಪಾರಾಗಲು ಸಹಾಯ ಮಾಡುತ್ತವೆ. ಬೆಡ್ರೂಮ್ ಅಲ್ಲಿ ಒಂದು ಫ್ಯಾನ್ ಇದ್ದರೆ, ನೀವು ಹಿತಕರವಾಗಿ ಇರಬಹುದು ಹಾಗು ನೀವು ಕೆಲಸಕ್ಕೆ ಹೋಗುವವರಾದರೆ, ನಿಮ್ಮ ಕಚೇರಿಯು ಏರ್-ಕಂಡೀಶನಿಂಗ್ ಇದೆಯಾ ಎಂದು ಖಚಿತಪಡಿಸಿಕೊಳ್ಳಿ. ನೀವು ಬಸ್ ಅಥವಾ ಟ್ರೈನ್ ಅಲ್ಲಿ ಪ್ರಯಾಣ ಮಾಡುವಾಗ ಮಡಚಬಹುದಾದ ಬೀಸಣಿಗೆ ಇಟ್ಟುಕೊಂಡಿರಿ.
೫. ಈ ಬೇಸಿಗೆಯಲ್ಲಿ, ನೀವು ಮೀನಾಗಿ
ಬೇಸಿಗೆಯ ಸಮಯದಲ್ಲಿ ಈಜಾಡುವುದು ನಿಮ್ಮ ದೇಹವನ್ನು ಅಷ್ಟೇ ಅಲ್ಲದೆ ನಿಮ್ಮ ತಲೆಯನ್ನು ಕೂಡ ತಣ್ಣಗೆ ಇಟ್ಟಿರುತ್ತದೆ. ಇದು ಒಂದು ತಿಳಿ ವ್ಯಾಯಾಮ ಆಗಿದ್ದು ನೀವು ಮನೆ ಹತ್ತಿರದ ಯಾವುದಾದರು ಈಜುಕೊಳಕ್ಕೆ ಭೇಟಿ ನೀಡಬಹುದು ಅಥವಾ ಇನ್ನೂ ಒಳ್ಳೆಯದೆಂದರೆ ಯಾವುದಾದರು ಸಮುದ್ರದ ತೀರಕ್ಕೆ ತೆರಳುವುದು.
ಆದರೆ ನೀವು ನಿಮ್ಮ ತ್ವಚೆಯ ರಕ್ಷಣೆಗೆ, ಪೋಷಣೆಗೆ ಬೇಕಾಗಿರುವ ಎಲ್ಲಾ ಕ್ರೀಮ್ ಗಳನ್ನ ಮರೆಯದೆ ತೆಗೆದುಕೊಂಡು ಹೋಗುವುದು ತುಂಬಾನೇ ಮುಖ್ಯ. ಏಕೆಂದರೆ, ಗರ್ಭಧಾರಣೆ ವೇಳೆ ನಿಮ್ಮ ತ್ವಚೆ ಎಂದಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ.
೬. ಸೂರ್ಯನ ನೇರ ಕಿರಣಗಳಿಂದ ದೂರವಿರಿ
ಶಾಪಿಂಗ್ ಮಾಡಬೇಕೆ ಅಥವಾ ನಿಮ್ಮ ಮನೆಯ ಪಕ್ಕದಲ್ಲಿ ಇರುವ ಪಾರ್ಕಿನಲ್ಲಿ ಒಂದು ವಿಹಾರ ಮಾಡಬೇಕೆ? ಇವೆಲ್ಲವನ್ನೂ ಮಾಡಿ, ಆದರೆ ಹೊರಾಂಗಣದಲ್ಲಿ ಮಾಡುವಂತ ಚಟುವಟಿಕೆಗಳನ್ನು ಸಮಯ ನೋಡಿಕೊಂಡು ಮಾಡುವುದು ತುಂಬಾ ಮುಖ್ಯ. ಏಕೆಂದರೆ ಬಿರುಬಿಸಿಲಿನಲ್ಲಿ ಹೊರಗಡೆ ಹೋಗುವುದು ಖಂಡಿತ ಬುದ್ಧಿವಂತಿಕೆ ಅಲ್ಲ. ಬೆಳ್ಳಂಬೆಳಗ್ಗೆ ಅಥವಾ ಮುಸ್ಸಂಜೆ ಸಮಯದಲ್ಲಿ ಹೊರಗಡೆ ಹೋಗಿ ಏಕೆಂದರೆ ಈ ಸಮಯದಲ್ಲಿ ಸೂರ್ಯನ ಬಿಸಿಲ ತೀವ್ರತೆ ಕಮ್ಮಿ ಇರುತ್ತದೆ.