maguvina-janana-aadamele-dampatigalu-matanaduva-vishayagalu-0

ಮದುವೆಗೆ ಮೊದಲು ಪ್ರೀತಿಯಲ್ಲಿ ಮುಳುಗಿ ಕನಸು ಕಾಣುತ್ತ  ಕಲ್ಪನೆಯ ಲೋಕದಲ್ಲಿ ಹಾರಾಟ ಮಾಡುತ್ತ ಇರುವ  ಜೋಡಿ ಮಾತನಾಡುವ  ಪ್ರತಿ ಮಾತಿನಲ್ಲೂ ಜೇನು ಸುರಿಯುತ್ತಿರುತ್ತದೆ .ದಿನ  ಎಲ್ಲಿ  ಭೇಟಿಯಾಗಬಹುದು ,ಎಲ್ಲಿ ಸುತ್ತಾಡಬಹುದು   ……ಈ ತರದ ಮಾತುಗಳು ನಡಿಯುತ್ತ ಇರುತ್ತದೆ .ಒಂದು ಸಲ  ಮದುವೆ ಆಗಿ ಜೀವನದ ಎರಡನೇ ಭಾಗ ಶುರು ಆದ ಮೇಲೆ ಬೆಳಗ್ಗೆ ಹಾಲು ತಗೊಂಡು ಬರುವ ವಿಷಯದಿಂದ  ಹಿಡಿದು ರಾತ್ರಿ ಊಟಕ್ಕೆ ಏನು ಅಡುಗೆ ಮಾಡಬಹುದು ಅನ್ನುವ ತನಕ ಮುಂದುವರಿಯುತ್ತದೆ  .ಒಮ್ಮೆ ಮಗು ಆದ ಮೇಲಂತೂ  ಮಾತುಗಳಲ್ಲಿ ಸಂಪೂರ್ಣ ಬದಲಾವಣೆ ಆಗುತ್ತದೆ  .ಜೀವನ ಶೈಲಿ ,ಆಹಾರ ವಿಧಾನ ಎಲ್ಲದರಲ್ಲೂ ಮಗು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ  .ಇದು ಸಹಜ.ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ನಡೆಯುವಂಥದ್ದೇ ಆಗಿದೆ  …… ಮಗುವಿನ ಆಗಮನ ಆದ ಮೇಲೆ  ದಂಪತಿಗಳು ಮಾತನಾಡುವ 9 ವಿಷಯಗಳು ಇಲ್ಲಿವೆ

೧.ಮಗುವಿನ ಭವಿಷ್ಯ

ಇದು ಮಗು ಹುಟ್ಟುವ   ಮೊದಲೇ ತಾಯಿ ತಂದೆ ಯೋಚಿಸಿರುತ್ತಾರೆ .ಮಗು ಬಂದ ಮೇಲಂತೂ ಅದರ ಬಗ್ಗೆನೇ ಮಾತುಕತೆ ನಡೆಯುತ್ತದೆ  .ತಾಯಿಗೆ ಮಗು ಐಎಎಸ್ ಮಾಡಬೇಕೆಂದು ಆಸೆ ,ಆದರೆ ತಂದೆಗೆ ಮಗು ವಿಜ್ಞಾನಿ ಆಗಲಿ ಅನ್ನುವ ಬಯಕೆ  .ಮತ್ತೆ ಪತ್ರಿಕೆಯಲ್ಲಿ ಯಾರದೋ  ಮಗು ಉತ್ತಮ ಯೋಗಪಟು ಅಂತ ವಿಷಯ ಬಂದರೆ ಮಗು ಅದನ್ನೇ  ಮಾಡಲಿ , ಅದು ಒಳ್ಳೆಯದು  ಅನ್ನಿಸುತ್ತದೆ .ಹೀಗೆ ಮಗುವಿನ  ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ .

೨.ಮಗುವಿನ ಅರೋಗ್ಯ

ಇದು ದಂಪತಿಗಳ ನಡುವಿನ ದಿನನಿತ್ಯದ ಮಾತುಕತೆಯ ಮುಖ್ಯ ವಿಷಯ . ಮಗುವಿನ  ಸ್ನಾನಕ್ಕೆ ಯಾವ ಸಾಬೂನು ಬಳಸಬಹುದು   ,ಮಗುವಿನ ಮೈ ಬೆಚ್ಚಗಿದೆ ,ಜ್ವರ ಬರುತ್ತದೆಯೋ ಏನೋ ….ಹೀಗೆ ಮಾತುಕತೆ ಸಾಗುತ್ತದೆ .

೩.ಮಗುವಿನ ಆಹಾರ.

ಮಗು ಚೆನ್ನಾಗಿ ಬೆಳೆಯಲು ತಿನ್ನಿಸಬೇಕಾದ ಆಹಾರ ಪದಾರ್ಥಗಳ ಪಟ್ಟಿ ಮಾಡಲಾಗುತ್ತದೆ .ಮೊಳಕೆ ಬರಿಸಿದ ಕಾಳುಗಳು,ಹಣ್ಣು ,ಹಾಲು  ಅದರ ಜೊತೆ ಮಾರ್ಕೆಟ್ ನಲ್ಲಿ ಬಂದಿರುವ ಶಿಶು ಆಹಾರ,ಪ್ರೋಟೀನು ಭರಿತ ,ಶರ್ಕರ ಪಿಷ್ಟವುಳ್ಳ  ಆಹಾರ ಎಲ್ಲವೂ ಚರ್ಚೆ ಮಾಡುವ ವಿಷಯಗಳಾಗಿವೆ .

೪.ಉಳಿತಾಯ

ಮಗು ಬಂದ ಮೇಲೆ  ಉಳಿತಾಯದ ಮಾತುಗಳು ಸಹಜವಾಗಿ ಜಾಸ್ತಿ ಆಗುತ್ತವೆ  . ದಿನಾ ಕುರುಕು ಹೊರಗಡೆ ತಿನ್ನುವುದು  ,ತಿಂಗಳಿರೆಡು ಜೊತೆ ಬಟ್ಟೆ ತೆಗೆದುಕೊಳ್ಳುವುದು ,ವಾರಕ್ಕೊಂದು ಸಿನಿಮಾ ನೋಡುವುದು  ಇವೆಲ್ಲವನ್ನೂ ನಿಲ್ಲಿಸುವ ಮಾತುಗಳು ಶುರುವಾಗುತ್ತವೆ..

೫. ಪ್ರಣಯ

ಮಗುವಿನ  ಬಗ್ಗೆ ಗಮನ  ಕೊಡುತ್ತ  ದಂಪತಿಗಳು ತಮ್ಮ ನಡುವಿನ ಪ್ರಣಯದ  ಬಗ್ಗೆ ಜಾಸ್ತಿ ಆಸಕ್ತಿ ವಹಿಸುವುದಿಲ್ಲ .ಮಗು ನಿದ್ರಿಸಿದ ಸಮಯದಲ್ಲಿ ಏಕಾಂತದ ಮಾತುಕತೆ  ನಡೆಯುತ್ತದೆ.ಹೆಂಡತಿ ತಾನು ದಪ್ಪವಾದ ನಂತರ ಗಂಡನಿಗೆ ತನ್ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ ಎಂದು ಕೇಳಿದರೆ,ಗಂಡ ತನಗೆ  ವಯಸ್ಸು ಜಾಸ್ತಿಯಾದ ಹಾಗೆ  ಕಾಣುತ್ತದೇನೋ   ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ.ಮುಂದಿನ  ಮಗು ಯಾವಾಗ ಮಾಡಿಕೊಳ್ಳಬೇಕೆಂದು  ,ಅಲ್ಲಿಯ ತನಕ ಜಾಗರೂಕತೆಯಿಂದ ಒಂದಾಗಬೇಕೆಂದೂ ವಿಷಯಗಳು ವ್ಯಕ್ತವಾಗುತ್ತವೆ

೬. ಬೇರೆ ಬೇರೆ ಆದಾಯಗಳ  ಹುಡುಕಾಟ

ಒಂದೇ ಸಂಬಳದಿಂದ ಮಗು ಮತ್ತು ಮನೆ ಎರಡನ್ನೂ ಸಂಭಾಳಿಸುವುದು  ಕಷ್ಟವೆಂದು  ಆದಾಯಕ್ಕೆ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಾರೆ .ಸಂಜೆ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವುದರ ಬಗ್ಗೆ ,ಮನೆಯಲ್ಲೇ ಅಣಬೆ ಬೆಳೆಸಿ ಮಾರಾಟ ಮಾಡಿ ದುಡ್ಡು ಮಾಡುವ ಸಾಧಕ ಬಾಧಕಗಳ ಬಗ್ಗೆ ,ಹೀಗೆ ಹಲವು ಆದಾಯ ತರುವ ವಿವಿಧ ವಿಧಾನಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ .

೭.ಮಗುವಿಗೆ  ತರಬೇಕಾದ ವಸ್ತುಗಳು

ನವೀನ ಶೈಲಿಯ ಬಟ್ಟೆಗಳು,ಹೊಸ ಹೊಸ ಆಟಿಕೆಗಳು ,ವಿನೂತನ ಕಲಿಕೆಯ ಉಪಕರಣಗಳು ಇವುಗಳ ಬಗ್ಗೆ ದಿನ ನಿತ್ಯ ದಂಪತಿಗಳು ಚರ್ಚಿಸುತ್ತಾರೆ .ಇದಕ್ಕಾಗಿ ಅಂತರ್ಜಾಲದ ಬಳಕೆ ,ಸ್ನೇಹಿತರು  ಹಾಗೂ ಸಹೋದ್ಯೋಗಿಗಳೊಡನೆ   ಚರ್ಚೆ ನಿರಂತರವಾಗಿ ನಡೆಯುತ್ತದೆ.ತಮ್ಮ ಮಗುವಿಗೆ ಅತ್ಯುತ್ತಮವಾದುದನ್ನು ನೀಡಬೇಕೆಂದು ಎಲ್ಲ ದಂಪತಿಗಳು ಆಶಿಸುತ್ತಾರೆ ..

೮.ಮಗುವಿಗೆ ಹೇಳಿ ಕೊಡಬೇಕಾದ   ಸುವಿಚಾರಗಳು

ಮಗುವಿನ ಹುಟ್ಟಿನ ನಂತರ  ಮನೆಯಲ್ಲಿ  ದೂರ  ದರ್ಶನವನ್ನು   ಕಡಿಮೆ ಬಳಸುವುದು  ,ದೂರವಾಣಿ  ಮತ್ತು ಸಾಮಾಜಿಕ ಜಾಲತಾಣಗಳ  ಉಪಯೋಗವನ್ನು  ಕಡಿಮೆ ಮಾಡುವುದರ ಬಗ್ಗೆ ದಂಪತಿಗಳ ನಡುವೆ ಪರ ವಿರೋಧ ಆದರೆ ಆರೋಗ್ಯಕರ  ಚರ್ಚೆಗಳು  ನಡೆಯುತ್ತವೆ.ಇದರ ಜೊತೆಗೆ ಮಗುವಿಗೆ ಒಳ್ಳೆಯದು ಮತ್ತು ಕೆಟ್ಟದರ  ನಡುವಿನ ತಿಳುವಳಿಕೆಯನ್ನು  ನೀಡುವುದು ,ಮಗು ಮುಂದೆ ಜೀವನದ ಹಾದಿಯಲ್ಲಿ ಸಹವಾಸ  ದೋಷದಿಂದ ಕಲಿಯಬಹುದಾದ ಕೆಟ್ಟ ಚಟಗಳ ಬಗ್ಗೆ ಹಾಗೂ ಪಾಲಕರಾಗಿ  ತಾವು ಅದನ್ನು   ತಡೆಯುವುದರ   ಬಗ್ಗೆ ಮಾತುಕತೆ ಇರುತ್ತದೆ.ಬೆಳಗ್ಗೆದ್ದು  ಸುಪ್ರಭಾತವನ್ನು  ಹಾಕುವುದು ಮಗುವಿಗೆ ನೀತಿ ಕತೆಗಳನ್ನು ಹೇಳುವುದು ಇವೆಲ್ಲವೂ ಮಗುವನ್ನು ಉತ್ತಮವಾಗಿ ಬೆಳೆಸುವುದಕ್ಕೆ ತಂದೆ  ತಾಯಿಗಳು ಅಳವಡಿಸಿಕೊಳ್ಳುವ ಕೆಲ ಮಾರ್ಗಗಳು

೯. ಮಗುವಿನ ಆರೋಗ್ಯಕ್ಕೆ ಪೂರಕವಾದ ದೈಹಿಕ ಚಟುವಟಿಕೆಗಳು  

ಮಗು ಚಟುವಟಿಕೆಯಿಂದ ಇರಬೇಕೆಂದರೆ ದೈಹಿಕ ವ್ಯಾಯಾಮ  ಅಗತ್ಯ  .ಅದಕ್ಕಾಗಿ  ತಾಯಿ ತಂದೆಯರು ಮಗುವನ್ನು ಬೆಳಗ್ಗೆ ವಾಯುವಿಹಾರಕ್ಕೆ ಕರೆದುಕೊಂಡು ಹೋಗಬೇಕೆಂದು ,ವಾರಕ್ಕೆ  ಎರಡು  ಸಲ ಫುಟ್ ಬಾಲ್ ತರಬೇತಿಗೆ ಸೇರಿಸುವ  ಬಗ್ಗೆ ಯೋಚಿಸುತ್ತಾರೆ .ಕೆಲವು  ದಂಪತಿಗಳಿಗೆ ತಮ್ಮ ಮಗು ಉತ್ತಮ ಆಟಗಾರನಾಗಬೇಕೆಂದು  ಬಯಸಿ  ಪ್ರತಿ  ದಿನ ಅದಕ್ಕಾಗಿ ತರಬೇತಿ ನೀಡಲೆಂದು ಉತ್ತಮ ದೈಹಿಕ ತರಬೇತಿದಾರರಿಗೆ ಹುಡುಕಾಟ ನಡೆಸುತ್ತಾರೆ.ಅಲ್ಲದೆ  ಮನೆಯ ಒಳಗೂ ಮಗು  ಚಟುವಟಿಕೆಯಿಂದ ಇರಬೇಕು ಎಂದು  ಸಣ್ಣ ಸಣ್ಣ ಕೆಲಸಗಳನ್ನು  ನೀಡುವ   ಬಗ್ಗೆ ಮಾತನಾಡುತ್ತಾರೆ .ಉದಾಹರಣೆಗೆ ಅಪ್ಪನಿಗೆ ಓದಲು ಪಕ್ಕದ ಅಂಗಡಿಯಿಂದ ಪತ್ರಿಕೆ ತರಿಸಲು ಮಗುವನ್ನು ನಡೆಸಿ ಕಳುಹಿಸುವ ಬಗ್ಗೆ ,ತನ್ನ  ಕೋಣೆಯನ್ನು  ತಾನೇ ಶುಚಿಗೊಳಿಸುವುದನ್ನು   ಹೇಳಿಕೊಡುವುದರ ಬಗ್ಗೆ ಪ್ರತಿದಿನ   ಮಾತುಕತೆ ನಡೆಯುತ್ತದೆ.

Leave a Reply

%d bloggers like this: