ಮೊಡವೆಗಳು ಸೌಂದರ್ಯವನ್ನು ಹಾಳುಮಾಡುವುದರ ಜೊತೆಗೆ ಕಿರಿಕಿರಿ, ನೋವನ್ನು ಉಂಟುಮಾಡುತ್ತವೆ. ಇದನ್ನು ನಿಮ್ಮ ಮುಖದಲ್ಲಿ ನೋಡಿದ ತಕ್ಷಣ ಹಲವು ಕ್ರೀಮ್ ಗಳನ್ನು ಬಳಸಲು ಶುರುಮಾಡುವಿರಿ, ಅದರಿಂದ ನಿಮ್ಮ ತ್ವಚೆಯ ನೈಸರ್ಗಿಕ ಕಾಂತಿಯನ್ನು ನೀವು ಕಳೆದುಕೊಳ್ಳಬಹುದು ಮತ್ತು ಸರಿಯಾದ ಫಲಿತಾಂಶ ಸಿಗದೇ ಇರಬಹುದು.
ನಿಮ್ಮ ತ್ವಚೆಯ ವಿಧವನ್ನು ಮೊದಲು ನೀವು ತಿಳಿದುಕೊಂಡು ಅದಕ್ಕೆ ತಕ್ಕಂತೆ ಮದ್ದನ್ನು ಉಪಯೋಗಿಸಿದರೆ ಶೀಘ್ರವೇ ಪರಿಹಾರವನ್ನು ನೀವು ಕಾಣುವಿರಿ. ಇದನ್ನು ನಿಯಮಿತವಾಗಿ ಬಳಸಿದರೆ ಬೇಗನೆ ಫಲಿತಾಂಶವನ್ನು ಕಾಣಬಹುದು.
ನಿಮ್ಮ ತ್ವಚೆ ಒಣಚರ್ಮದ್ದಾಗಿದ್ದರೆ
೧.ಮಜ್ಜಿಗೆ
ಸಾಮಾನ್ಯವಾಗಿ ಸಿಗುವ ವಸ್ತು. ಇದರಲ್ಲಿ, ಲ್ಯಾಕ್ಟಿಕ್ ಆಮ್ಲವಿದ್ದು, ಇದು ತ್ವಚೆಯಲ್ಲಿ ಹಾನಿಯಾಗಿರುವ ಕೋಶಗಳನ್ನು ಸರಿಪಡಿಸುವಲ್ಲಿ ಮತ್ತು ಹೊಸ ಕೋಶಗಳು ಬೆಳೆಯುದಕ್ಕೆ ಸಹಾಯ ಮಾಡುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಇದರಿಂದ ಮುಖ ತೊಳೆಯುವುದು ಮೊಡವೆಯ ನಿವಾರಣೆಗೆ ಸಹಾಯವಾಗುತ್ತದೆ.
೨.ಜೇನುತುಪ್ಪ
ಸಾವಯವ ಜೇನುತುಪ್ಪವನ್ನು ಬಳಸುವುದು ಉತ್ತಮ. ಇದನ್ನು ಮೊಡವೆಯು ಇರುವ ಜಗದಲ್ಲಿ ಮಾತ್ರ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳುವುದು ಒಳ್ಳೆಯ ಉಪಾಯ. ಇದು ತ್ವಚೆಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ.
ಎಣ್ಣೆಯುಕ್ತ ತ್ವಚೆಯಾಗಿದ್ದರೆ
೧.ಅಡುಗೆ ಸೋಡಾ
ಒಂದು ಚಿಟಿಕೆ ಅಡುಗೆ ಸೋಡಾವನ್ನು ಸ್ವಲ್ಪ ನೀರಿಗೆ ಹಾಕಿ ಮತ್ತು ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.ನಿಮ್ಮ ತ್ವಚೆಯು ಎಣ್ಣೆಯುಕ್ತವಾಗಿರುವುದರಿಂದ ಮೊದಲು ಎಣ್ಣೆ ಅಂಶವನ್ನು ತೆಗೆಯುವುದು ಮೊಡವೆ ನಿವಾರಣೆಗೆ ಸೂಕ್ತ. ಅಡುಗೆ ಸೋಡಾ ಇದನ್ನು ಮಾಡುವುದರಲ್ಲಿ ಪರಿಣಾಮಕಾರಿಯಾಗಿದೆ.
೨.ಮೊಟ್ಟೆ
ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆ ಅಂಶವನ್ನು ತೆಗೆಯಲು ಇದು ಸಹಾಯಕಾರಿ. ಮೊಟ್ಟೆಯಲ್ಲಿರುವ ಬಿಳಿಭಾಗದ ಲೋಳೆಯನ್ನು ಮೊಡವೆ ಇರುವ ಜಾಗಕ್ಕೆ ಅನ್ವಯಿಸಿ, ಒಣಗಲು ಬಿಡಿ. ಒಣಗಿದ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ. ಮುಖದಲ್ಲಿ ಹೆಚ್ಚು ಮೊಡವೆ ಇದ್ದರೆ, ಬಿಳಿ ಲೋಳೆಯನ್ನು ಮುಖದ ಪೂರ ಹಚ್ಚಿ(ಮಾಸ್ಕ್ ನಂತೆ ಮಾಡಿಕೊಳ್ಳಿ), ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
ಚರ್ಮವು ಸೂಕ್ಷ್ಮವಾಗಿದ್ದರೆ
೧.ಗಂಧ
ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ, ಚರ್ಮವು ಪ್ರತಿಯೊಂದು ಕ್ರಿಯೆಗೂ ಬೇಗನೆ ಪ್ರತಿಕ್ರಿಯೆ ನೀಡುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸೂಕ್ಷ್ಮ ಚರ್ಮವು ಅತಿಯಾದ ಉಷ್ಣಾಂಶದಿಂದಾಗಿ ಮೊಡವೆಗಳನ್ನು ಪಡೆಯುತ್ತದೆ. ಆದ್ದರಿಂದ ತ್ವಚೆಯನ್ನು ತಂಪಾಗಿ ಇರಿಸುವುದು ಅಗತ್ಯ. ಗಂಧವನ್ನು ಪುಡಿ ಮಾಡಿ, ಸ್ವಲ್ಪ ನೀರಿಗೆ ಹಾಕಿ, ಪೇಸ್ಟ್ ನಂತೆ ಮಾಡಿಕೊಂಡು ಮೊಡವೆ ಇರುವ ಜಾಗಕ್ಕೆ ಹಚ್ಚಿ ಒಣಗಿದ ನಂತರ ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
೨.ಪರಂಗಿ(ಪಪ್ಪಾಯ)
ಪಪ್ಪಾಯಿಯ ಸಿಪ್ಪೆಯನ್ನು ತೆಗೆದು, ಹಣ್ಣಿನ ಒಳಭಾಗದ ಒಂದು ತುಂಡನ್ನು ತೆಗೆದುಕೊಂಡು, ಮೊಡವೆಯಿರುವ ಜಾಗಕ್ಕೆ ಅನ್ವಯಿಸಿ, ಹಣ್ಣಿನ ರಸ ಚರ್ಮದೊಳಕ್ಕೆ ಹೋಗಿ, ಮೊಡವೆ ನಿವಾರಣೆಗೆ ಸಹಾಯಮಾಡುತ್ತದೆ. ಅದು ಒಣಗಿದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
ಸಾಮಾನ್ಯ ಸಲಹೆ
೧.ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವುದು ಮೊಡವೆ ಬರುವುದನ್ನು ತಡೆಯುತ್ತದೆ.
೨.ಎಣ್ಣೆ ಪದಾರ್ಥ ಆಹಾರಗಳನ್ನು ಹೆಚ್ಚು ಸೇವಿಸಬೇಡಿ.
೩.ದಿನಕ್ಕೆ ಕನಿಷ್ಠ ಎರಡು ಬಾರಿ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯುವುದು.
೪.ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಳ್ಳ ಆಹಾರ ಸೇವಿಸಿ, ಇದರಿಂದ ತ್ವಚೆಯ ಜೀವಕೋಶಗಳಿಗೆ ಹಾನಿಯಾಗುವ ಅಥವಾ ಹಾನಿ ಮಾಡುವಂತಹವುಗಳಿಂದ ರಕ್ಷಣೆ ನೀಡುತ್ತದೆ.
೫.ಹೆಚ್ಚು ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಸೇವಿಸಿ.