krishna-janmashtami-makkala-anda

ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿ ಎಂದರೆ ಎಲ್ಲರಲ್ಲೂ ಖುಷಿ, ಸಂಭ್ರಮ ಅದಕ್ಕೆ ಮನೆಯಲ್ಲಿ ಮಾಡುವ ಅಡುಗೆ ಅಥವಾ ಎಲ್ಲರು ಒಟ್ಟಾಗಿ ಸೇರುವುದು ಸರಿಯಾದ ಕಾರಣ ನನಗೆ ತಿಳಿದಿಲ್ಲ, ಆದರೆ ಹೊಸ ಪೋಷಕರಲ್ಲಿ ಈ ದಿನ ಎಲ್ಲಿಲ್ಲದ ಖುಷಿ, ಸಂತೋಷ, ಸಂಭ್ರಮವನ್ನು ತರುತ್ತದೆ. ಕಾರಣ ತಮ್ಮ ಪುಟ್ಟ ಕಂದಮ್ಮಗಳನ್ನು ಕೃಷ್ಣ, ರಾಧೆ ಮತ್ತು ಯಶೋಧರೆ ವಸ್ತ್ರಗಳಿಂದ ಅಲಂಕರಿಸಿ ಅವರ ಫೋಟೋ ತೆಗೆದು ಆಚರಣೆ ಮಾಡುವುದು. ಮಕ್ಕಳಿಗೆ ಅವರ ವೇಷ ಧರಿಸುವುದೇ ಅವರಿಗೆ ಖುಷಿ. ಇನ್ನು ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಅಲ್ಲಿ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವುದು ಯಾರಿಗೆ ತಾನೇ ಖುಷಿ ನೀಡುವುದಿಲ್ಲ ಹೇಳಿ.

ಮಕ್ಕಳ ತುಂಟಾಟ ಯಾರಿಗೆ ಇಷ್ಟವಿಲ್ಲ, ಮಕ್ಕಳು ಮನೆಯಲ್ಲಿ ಇದ್ದರೆ ಸಾಕು, ಅವರ ಜೊತೆ ಕಾಲಕಳೆಯುವುದೇ ತಿಳಿಯುವುದಿಲ್ಲ. ಇನ್ನು ಇಂತಹ ಅಪರೂಪದ ದಿನಗಳಲ್ಲಿ ಅವರನ್ನು ರೆಡಿ ಮಾಡುವುದರಲ್ಲೇ ನೀವು ಅರ್ಧ ದಿನ ಕಳೆದಿರುತ್ತೀರಾ. ಶಾಲೆಗಳಲ್ಲಿ ಈ ದಿನ ವೇಷಭೂಷಣ ಸ್ಪರ್ಧೆ ಏರ್ಪಡಿಸುವುದು ಸಹಜ, ನಿಮ್ಮ ಮಗುವು ಅಂದವಾಗಿ ಕಾಣುವಂತೆ ಮಾಡಿ ಮೊದಲ ಸ್ಥಾನ ಪಡೆಯುವಂತೆ ಮಾಡುವುದು ನಿಮ್ಮ ಕೆಲಸ. ಇದಕ್ಕೆ ನೀವು ಸ್ವಲ್ಪ ಬುದ್ದಿ ಉಪಯೋಗಿಸಬೇಕು. ನಿಮ್ಮ ಮಗುವಿಗೆ ಯಾವ ವೇಷ ಸರಿಯಾಗಿ ಹೊಂದುತ್ತದೆ ಎಂಬುದನ್ನು ಮೊದಲು ಗಮನಿಸಿ, ನಂತರ ಅದರಂತೆ ಸುಂದರವಾಗಿ ಅಲಂಕರಿಸಿ, ಅದರ ಜೊತೆಗೆ ಆ ವೇಷದ ಒಂದೆರಡು ಅನುಕರಣೆ ಮಾಡಲು ಹೇಳಿಕೊಡಿ. ಮತ್ತು ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸಿ ನಿಮ್ಮ ಮಗುವಿಗೆ ಮೊದಲ ಸ್ಥಾನ ಬರುವಂತೆ ಮಾಡಿ. ಉದಾಹರಣೆಗೆ ಕೃಷ್ಣನ ವೇಷ ಧರಿಸಿದರೆ, ಕೃಷ್ಣನ ಕೆಲವು ತುಂಟಾಟಗಳನ್ನು ಅನುಕರಣೆಯನ್ನು ಹೇಳಿಕೊಡಿ. ಅವನು ಬೆಣ್ಣೆಯನ್ನು ಹೇಗೆ ಕದ್ದು ತಿನ್ನುತ್ತಿದ್ದ, ಸ್ನೇಹಿತರೊಡನೆ ಹೇಗೆ ಆಟವಾಡುತ್ತಿದ್ದ ಎಂಬುದನ್ನು ಅನುಕರಿಸಲು ಹೇಳಿ. ಈ ಸಮಯದಲ್ಲಿ ನೀವು ಯಶೋಧೆಯ ವೇಷ ಧರಿಸಿ ಮಾಡುವುದರಿಂದ ನಿಮ್ಮ ಮಗುವು ವೇಧಿಕೆಯ ಮೇಲೆ ಭರವಸೆಯಿಂದ ಮಾಡುತ್ತಾನೆ. ಅವನ ಮನಸ್ಸಿಗೂ ಖುಷಿ ಸಿಗುವುದರ ಜೊತೆಗೆ ನಿಮ್ಮ ಜೀವನದಲ್ಲಿ ಮರೆಯಲಾಗದ ಒಂದು ಅದ್ಭುತ ಕ್ಷಣವಾಗಿ ಉಳಿದುಕೊಳ್ಳುತ್ತದೆ.

ಈ ದಿನದ ಮತ್ತೊಂದು ವಿಶೇಷತೆ ಎಂದರೆ ಮಡಿಕೆ ಹೊಡೆಯುವುದು. ಯುವಕರು ಹೆಚ್ಚಿನ ಉತ್ಸಾಹದಿಂದ ಮಾಡುವುದು. ಮಡಿಕೆಗೆ ಬಣ್ಣದ ನೀರು ಅಥವಾ ಕೆಲವರು ಮೊಸರನ್ನು ಮಡಿಕೆಯೊಳಗೆ ತುಂಬಿ, ವೃತ್ತಾಕಾರದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪಿರಮಿಡ್ ನಂತೆ ನಿಂತು ಮೇಲೆ ಕಟ್ಟಿರುವ ಮಡಿಕೆಯನ್ನು ಹೊಡೆಯುವುದು, ಅದನ್ನು ನೋಡುವುದೇ ಖುಷಿ. ಮಡಿಕೆ ಹೊಡೆಯುವ ವಾಡಿಕೆ ಏಕೆ ಎಂದರೆ ಕೃಷ್ಣನು ಚಿಕ್ಕ ವಯಸ್ಸಿನಲ್ಲಿ ಮಡಿಕೆಯಿಂದ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದ, ಇದನ್ನು ಕಂಡು ಕೃಷ್ಣನ ತಾಯಿ ಅವನ ಕೈಗೆ ಮಡಿಕೆ ಸಿಗದಂತೆ ಹಗ್ಗಕ್ಕೆ ಕಟ್ಟಿ ಮೇಲೆ ನೇತಾಕುತ್ತಾಳೆ. ಆದರೆ ಬೆಣ್ಣೆ ಪ್ರಿಯ ಮುದ್ದು ಕೃಷ್ಣ ತನ್ನ ಸ್ನೇಹಿತರ ಸಹಾಯದಿಂದ ಅವರ ಹೆಗಲ ಮೇಲೆ ನಿಂತು ಮಡಿಕೆಯನ್ನು ಎತ್ತಿಕೊಂಡು ಬೆಣ್ಣೆ ತಿನ್ನುತ್ತಿದ್ದನು. ಕಾರಣ ಏನೇ ಇರಲಿ, ಇದನ್ನು ಮಾಡುವುದು ಖುಷಿ, ನೋಡುವುದು ಖುಷಿ.

ಕೃಷ್ಣ ಜನ್ಮಾಷ್ಟಮಿ ಮಕ್ಕಳಲ್ಲಿ, ಸಂಬಂಧಿಗಳ, ನೆರೆಹೊರೆಯವರ ಜೊತೆ ಹೇಗೆ ಬೆರೆಯಬೇಕು ಎಂಬುದನ್ನು ಹೇಳಿಕೊಡುವುದರ ಜೊತೆಗೆ ಅವರಲ್ಲಿ ಅನೇಕ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿ ತಾವೊಬ್ಬರೇ ಇರುವಾಗ ನೀವು ಎಷ್ಟು ಬಲವಂತ ಮಾಡಿದರು ತಿನಿಸುಗಳನ್ನು ತಿನ್ನಲು ಇಚ್ಛಿಸುವುದಿಲ್ಲ, ಆದರೆ ಇಂತಹ ದಿನಗಳಲ್ಲಿ ಮನೆಯ ಎಲ್ಲಾ ಸಂಬಂಧಿಗಳು, ನೆರೆಹೊರೆಯವರ ಮಕ್ಕಳು ತಿನಿಸುಗಳನ್ನು ತಿನ್ನುವುದನ್ನು ನೋಡಿ, ಅವರಿಗೂ ತಿನ್ನಲು ಆಸೆಯಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ನಿಮಗೆ ಸಹಾಯ ಮಾಡಲು ನಿಮ್ಮ ಮುದ್ದು ಕಂದಮ್ಮ ಸಿದ್ಧವಿರುತ್ತಾನೆ/ಳೆ.

ಕೃಷ್ಣನ ತುಂಟುತನವನ್ನು ನಿಮ್ಮ ಮಕ್ಕಳಲ್ಲಿ ಕಾಣಲು ಸಿಗುವ ಒಂದೇ ಒಂದು ದಿನ ಇದು, ಇದನ್ನು ಖುಷಿಯಿಂದ ಸಂಭ್ರಮಿಸಿ.

Leave a Reply

%d bloggers like this: