rani-chennamma

ಕಿತ್ತೂರು ಚೆನ್ನಮ್ಮ, ಕಿತ್ತೂರಿನ ರಾಣಿ, 1824 ಬ್ರಿಟಿಷರ ವಿರುದ್ದ ಕತ್ತಿ ಹಿಡಿದು ಸೆಣೆಸಾಟ ನಡೆಸಿದ ಮೊದಲ ಭಾರತೀಯ ನಾಯಕರಲ್ಲಿ ಒಬ್ಬಳು. ರಾಣಿ ಚೆನ್ನಮ್ಮನ ಜನನ 1778 ಅಲ್ಲಿ ಆಯಿತು. ನಮ್ಮ ನಾಡಿನ ಹೆಮ್ಮೆ, ಕಿತ್ತೂರಿನ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ಮಹಿಳೆ. ಈಕೆಯ ವೀರ ಹೋರಾಟ ಸೆರೆಮನೆವಾಸದಲ್ಲಿ ಅಂತ್ಯ ಕಂಡರೂ, ಈಗಲೂ ನಮ್ಮ ನಾಡಿನ ಜನತೆಯಲ್ಲಾ ಎದೆತಟ್ಟಿಕೊಂಡು ನಮ್ಮ ನಾಡಿನ ವೀರಮಹಿಳೆ ಇವಳು ಎಂದು ಹೆಮ್ಮೆ ಪಡುವರು. ಆದರೆ ಚೆನ್ನಮ್ಮನ ಹಿಂದಿನ ಕಥೆ ಏನು? ಆಕೆಯು ಹೋರಾಟದ ಬಗ್ಗೆ ನಾವು ತಿಳಿದಿರುತ್ತೇವೆ, ಆದರೆ ಆಕೆ ಒಂದು ತಾಯಿಯಾಗಿ ಹೇಗೆ ಹೋರಾಟಕ್ಕೆ ಧುಮುಕಿದಳು ಎಂಬುದು ನಿಮಗೆ ಗೊತ್ತೇ?

ಈ ಸ್ವಾಂತಂತ್ರ್ಯ ದಿನದಂದು ನಾವು ಅವಳ ಬಗ್ಗೆ ನೆನೆಯೋಣ. ರಾಣಿ ಚೆನ್ನಮ್ಮನು ಕೇವಲ 15 ವರ್ಷದವಳಿದ್ದಾಗ ಕಿತ್ತೂರಿನ ರಾಜ ಮಲ್ಲಸರ್ಜನ ಕೈ ಹಿಡಿಯುತ್ತಾಳೆ ಹಾಗು ಕಿತ್ತೂರಿನ ರಾಣಿ ಆಗುತ್ತಾಳೆ. ಈ ದಂಪತಿಗಳಿಗೆ ಒಂದು ಗಂಡು ಮಗು ಜನಿಸುತ್ತದೆ. ಎಲ್ಲಾ ಚೆನ್ನಾಗಿದ್ದ ರಾಣಿ ಚೆನ್ನಮ್ಮನ ಜೀವನದಲ್ಲಿ ಬಿರುಗಾಳಿಯಂತೆ ಬಂದಿದ್ದು ತನ್ನ ಪತಿ ಮಲ್ಲಸರ್ಜನ ಸಾವು. 1816 ರಲ್ಲಿ ಮಲ್ಲಸರ್ಜನು ಅಸುನೀಗಿದನು. ನಂತರ ರಾಜ್ಯದ ಹೊಣೆ ಚೆನ್ನಮ್ಮನ ಹೆಗಲ ಮೇಲೆ ಬೀಳುತ್ತದೆ. ಧೃತಿಗೆಡದ ಚೆನ್ನಮ್ಮನು ತನ್ನ ಸಣ್ಣ ಮಗನೊಂದಿಗೆ ತನ್ನ ರಾಜ್ಯವನ್ನು ಸಮರ್ಥವಾಗಿ ಆಳುತ್ತಾಳೆ. ಆದರೆ ದುರಾದ್ರಷ್ಟ ಅನ್ನುವುದು ಈ ವೀರಮಹಿಳೆಯ ಬೆನ್ನು ಬಿಡಲೇ ಇಲ್ಲ. ಕೆಲವೇ ವರ್ಷಗಳ ನಂತರ ಅಂದರೆ 1824 ಅಲ್ಲಿ ಅವಳ ವಂಶದ ಕುಡಿ, ಅವಳ ಮಗನೂ ಕೊನೆಯುಸಿರೆಳೆದನು! ತಾಯಿಯ ಆಕ್ರಂದನ ಮುಗಿಲು ಮುಟ್ಟಿತು, ಒಬ್ಬಂಟಿಯಾದಳು ಚೆನ್ನಮ್ಮ!

ತನ್ನ ಮಗನನ್ನ ಕಳೆದುಕೊಂಡಾಗ ಯಾವ ತಾಯಿ ಆಗಲಿ ಎಲ್ಲವನ್ನೂ ಕೈಚೆಲ್ಲಿ ಶೋಕಿಸುತ್ತಾ ಕೂರುವಳು. ಆದರೆ ಇದೇ ತಾನೇ ಸಾಮಾನ್ಯ ಮಹಿಳೆಗೆ ಹಾಗು ವೀರಮಹಿಳೆ ಚೆನ್ನಮ್ಮನಿಗು ಇರುವ ವ್ಯತ್ಯಾಸ. ತಾನು ಕಳೆದುಕೊಂಡಿರುವುದಕ್ಕೆ ಶೋಕಿಸುವದ್ದಕ್ಕಿಂತ ತನ್ನ ಮೇಲೆ ನಂಬಿಕೆ ಇಟ್ಟಿರುವ ನಾಡಿನ ಜನತೆಯನ್ನ ಕಾಪಾಡುವ ಜವಾಬ್ದಾರಿ ಅವಳಿಗೆ ಮಹತ್ವ ಎಂದೆನಿಸಿತು. ತನ್ನ ರಾಜ್ಯವು ಎಂದಿಗೂ ಬ್ರಿಟಿಷರ ಪಾಲು ಆಗಬಾರದೆಂದು, ಶಿವಲಿಂಗಪ್ಪ ಎಂಬ ಗಂಡು ಮಗುವನ್ನು ಪಟ್ಟಕ್ಕೆ ಏರಿಸಲೆಂದೇ ದತ್ತು ಪಡೆದಳು.

ಆದರೆ ಬ್ರಿಟಿಷರಿಗೆ ಎದು ಒಂಚೂರು ಹಿಡಿಸಲಿಲ್ಲ. ಲಾರ್ಡ್ ದಾಲ್ಹೌಸಿಯ ಡಾಕ್ಟರಿನ್ ಆಫ್ ಲ್ಯಾಪ್ಸ್ ಪ್ರಕಾರ ಒಬ್ಬ ರಾಜನು ತನ್ನ ರಾಜ್ಯವನ್ನ ಕೇವಲ ತನ್ನ ಸ್ವಂತ ಮಗನಿಗೆ ಮಾತ್ರ ಬಿಟ್ಟುಕೊಡಬೇಕು. ಒಂದು ವೇಳೆ ಅವನಿಗೆ ಗಂಡು ಮಗು ಇಲ್ಲದಿದ್ದರೆ, ರಾಜ್ಯವು ಬ್ರಿಟಿಷರ ಪಾಲಾಗುತ್ತದೆ. ಆಗ ರಾಣಿ ಚೆನ್ನಮ್ಮನು ಬ್ರಿಟಿಷರಿಗೆ ತನ್ನ ರಾಜ್ಯದ ಸ್ತಿತಿಯನ್ನ ತಿಳಿಸಿ, ಈ ನಿಯಮದಿಂದ ತಮ್ಮ ರಾಜ್ಯಕ್ಕೆ ವಿನಾಯಿತಿ ನೀಡಲು ಕೇಳಿಕೊಳ್ಳುವಳು. ಇದನ್ನ ಕಮಿಷನರ್ ಚಾಪ್ಲಿನ್ ಒಪ್ಪಲೇ ಇಲ್ಲ. ಬದಲಿಗೆ ಶಿವಲಿಂಗಪ್ಪನನ್ನು ರಾಜ್ಯದಿಂದ ಗಡಿಪಾರು ಮಾಡಲು ಹಾಗು ಕಿತ್ತೂರಿನ ಒಡೆತನ ಬ್ರಿಟಿಷರಿಗೆ ಬಿಟ್ಟುಕೊಡುವಂತೆ ಆಗ್ರಿಹಿಸುತ್ತಾರೆ. ಇದರಿಂದ ಕೆಂಡಾಮಂಡಲವಾದ ಚೆನ್ನಮ್ಮನ್ನು ಸುತಾರಾಂ ಒಪ್ಪುವುದಿಲ್ಲ. ಇದೇ ಕಾರಣಕ್ಕೆ ಯುದ್ಧ ಶುರುವಾಗುತ್ತದೆ.

ಅಕ್ಟೋಬರ್ 1824ರಲ್ಲಿ ಬ್ರಿಟಿಷರು ಹಾಗು ಕಿತ್ತೂರು ರಾಜ್ಯದ ನಡುವಿನ ಮೊದಲ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಬಹಳಷ್ಟು ಹಾನಿ ಅನುಭವಿಸಿದ್ದು ಬ್ರಿಟಿಷರೆ. ಬ್ರಿಟಿಷ್ ಕಲೆಕ್ಟರ್ ಹಾಗು ರಾಜತಾಂತ್ರಿಕ ಜಾನ್ ಥಕೆರಿ ಕೂಡ ಆ ಯುದ್ಧದಲ್ಲಿ ಸಾವನ್ನಪ್ಪಿದ. ಇಷ್ಟೇ ಅಲ್ಲದೆ ಎರೆಡು ಬ್ರಿಟಿಷ್ ಅಧಿಕಾರಿಗಳಾದ ವಾಲ್ಟರ್ ಎಲಿಯಟ್ ಹಾಗು ಸ್ಟೀವನ್ಸನ್ ಅನ್ನು ಚೆನ್ನಮ್ಮ ಒತ್ತೆಯಾಳುಗಳಾಗಿ ಇಟ್ಟುಕೊಂಡಳು.

ಆದರೆ ಈ ಯುದ್ಧ ಹಾಗು ಅದರಿಂದ ಆಗುವ ಹಾನಿಗಳನ್ನ ನಿಲ್ಲಿಸಲು ಬ್ರಿಟಿಷರ ಜೊತೆ ಚೆನ್ನಮ್ಮನು ಒಂದು ಒಪ್ಪಂದ ಮಾಡಿಕೊಳ್ಳುತ್ತಾಳೆ. ಆ ಒಪ್ಪಂದದ ಪ್ರಕಾರ ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದರೆ, ಬ್ರಿಟಿಷರು ಮತ್ತೊಮ್ಮೆ ಕಿತ್ತೂರಿನ ಮೇಲೆ ಯುದ್ಧ ಸಾರುವುದಿಲ್ಲವೆಂದು. ಆದರೆ ಮೊದಲ ಯುದ್ಧದಲ್ಲಿ ಮುಖಭಂಗ ಅನುಭವಿಸಿದ್ದ ಚಾಪ್ಲಿನ್ ತನ್ನ ಕುತಂತ್ರದ ಕರಾಳ ಬುದ್ಧಿಯನ್ನ ಉಪಯೋಗಿಸಿ, ಮೈಸೂರು ಮತ್ತು ಸೊಲ್ಲಾಪುರದಿಂದ ಮುಂಚೆಗಿಂತ ಹೆಚ್ಚಿನ ಶಸ್ತ್ರಾಸ್ತ್ರ ಹಾಗು ಸೈನಿಕರನ್ನ ಕರೆತಂದು ಕಿತ್ತೂರಿನ ಮೇಲೆ ಯುದ್ಧ ಸಾರುತ್ತಾನೆ. ಆಗ ಚೆನ್ನಮ್ಮನು ತನ್ನ ಬಂಟರಾದ ಸಂಗೊಳ್ಳಿ ರಾಯಣ್ಣ ಮತ್ತು ಗುರುಸಿದ್ದಪ್ಪ ಜೊತೆಗೂಡಿ ಒಂದು ವಿರೋಚಿತ ಹೋರಾಟ ನಡೆಸುತ್ತಾಳೆ. 12 ದಿನಗಳವರೆಗೆ ಈ ಯುದ್ಧ ಮುಂದುವರೆಯುತ್ತದೆ. ಈ ಯುದ್ಧದಲ್ಲಿ ಥಾಮಸ್ ಮುನ್ರೋ ಅವರ ಮೈದುನ ಸೊಲ್ಲಾಪುರದ ಸಬ್-ಕಲೆಕ್ಟರ್ ಮಿ.ಮುನ್ರೋ ಸಾವನ್ನಪ್ಪುತ್ತಾನೆ.

ಚೆನ್ನಮ್ಮನ ಸೇನೆಯಲ್ಲೇ ಇದ್ದ ಸೈನಿಕರಾದ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟ ರಾವ್ ಚೆನ್ನಮ್ಮನ ಸೇನೆ ಫಿರಂಗಿಗಳಿಗೆ ಬಳಸುತ್ತಿದ್ದ ಬಂದೂಕು ಸಿಡಿಮದ್ದಿನಲ್ಲಿ ಮಣ್ಣು ಮತ್ತು ಸಗಣಿಯನ್ನ ಬೆರೆಸಿ ಅದನ್ನು ಕೆಲಸಕ್ಕೆ ಬಾರದಂತೆ ಮಾಡುತ್ತಾರೆ. ಸಂಖ್ಯೆಯಲ್ಲಿ ಮತ್ತು ಶಸ್ತ್ರಾಸ್ತ್ರಗಳಲ್ಲಿ ಬಲವಾಗಿದ್ದ ಬ್ರಿಟಿಷ್ ಸೇನೆಯು ಯುಧ್ಹದಲ್ಲಿ ವಿಜಯಿಯಾಯಿತು. ಈ ಯುದ್ಧದಲ್ಲಿ ಚೆನ್ನಮ್ಮನನ್ನು ಬ್ರಿಟಿಷರು ಸೆರೆ ಹಿಡಿದು ಆಕೆಯು ಜೀವನ ಪರ್ಯಂತ ಬೈಲಹೊಂಗಲದ ಸೆರೆಮನೆಯಲ್ಲಿ ಕಾಲ ಕಳೆಯುವಂತೆ ಮಾಡುತ್ತಾರೆ. ಹೀಗೆ ಕೊನೆಯವರೆಗೂ ಚೆನ್ನಮ್ಮನ ಛಲಬಿಡದೆ, ತನ್ನ ವಯಕ್ತಿಕ ಹಾನಿಗಳ ಬಗ್ಗೆ ಚಿಂತಿಸದೆ, ತನ್ನ ನಾಡಿನ ಜನತೆಗಾಗಿ ಹೋರಾಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ್ತಾಳೆ.

Leave a Reply

%d bloggers like this: