maguvige-massage

ಮಕ್ಕಳನ್ನು ಲಾಲಿಸಿ, ಮುದ್ದಿಸಿ, ಪೋಷಿಸಿ ಬೆಳಸಿದ ಅನುಭವಗಳ ಮೆಲುಕುಹಾಕುವಿಕೆಯೇ ಜೀವನದ ಅತೀ ದೊಡ್ಡ ಸಂಭ್ರಮದ ಗಳಿಗೆ.

ಮಕ್ಕಳ ಪೋಷಣೆಯೆಂಬುದು, ಅವರಿಗೆ ನಾಲ್ಕು ಹೊತ್ತು ಹೊಟ್ಟೆತುಂಬಿಸುವುದರಲ್ಲಿ ಮಾತ್ರ ಅಂತ್ಯಗೊಳ್ಳುವುದಿಲ್ಲ. ಅದು ಹಲವಾರು ಕರ್ತವ್ಯಗಳಿಂದ ಆವೃತ್ತಗೊಂಡಿದೆ. ಅದರಲ್ಲೂ, ಮಗುವಿಗೆ ಮಾಲೀಸು ಮಾಡಿ ಸ್ನಾನ ಮಾಡಿಸುವುದಂತೂ ಮಹತ್ತರ ಜವಾಬ್ದಾರಿ.

ಎಣ್ಣೆಯುಜ್ಜಿ ಮಾಲೀಸು ಮಾಡಿ, ಮಗುವಿಗೆ ಸ್ನಾನ ಮಾಡಿಸುವುದು ಕೇವಲ ಸಾಂಪ್ರದಾಯಿಕ ಮಾತ್ರವಲ್ಲ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕೂಡಾ ಪೂರಕವಾಗಿದೆಯೆಂದು ಇಡೀ ಜಗತ್ತೇ ತಿಳಿದುಕೊಂಡಿದೆ.

ಆಗತಾನೇ ಮಗುವಿನ ತಾಯಿಯಾದವರ ಆತಂಕಗಳಿಗೆ ನೀರೆರೆಯುವ ಹಲವಾರು ಸನ್ನಿವೇಶಗಳು ಆಗಾಗ ಎದುರಾಗುತ್ತಿರುತ್ತವೆ. ಅದರಲ್ಲೂ,ಮಗುವಿನ ಸ್ನಾನ ಮಾಡಿಸುವ ವಿಷಯ ಚರ್ಚಿಸಲ್ಪಡುವಾಗ,ಯಾವ ಎಣ್ಣೆಯನ್ನು ಉಪಯೋಗಿಸಬೇಕು ? ಯಾವ ವಿಧಾನವನ್ನು ಅನುಸರಿಸಬೇಕು ? ಎಷ್ಟು ಗಂಟೆಗಳ ಕಾಲ ಎಣ್ಣೆಯಿಂದ ಮಸಾಜ್ ಮಾಡಬೇಕು ? ಏನನ್ನೆಲ್ಲಾ ಮಾಡಬಹುದು? ಯಾವುದನ್ನು ಮಾಡಬಾರದು ? ಎಂಬೆಲ್ಲಾ ಪ್ರಶ್ನೆಗಳು ತಾಯಿಯ ತಲೆಯ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತದೆ. ಕುಟುಂಬದ ಹಿರಿಯರ ಅಭಿಪ್ರಾಯಗಳು ಮಹತ್ತರ ಪಾತ್ರ ವಹಿಸುವ ಇಂತಹ ನಿರ್ಣಾಯಕ ವೇಳೆಯಲ್ಲಿ, ಹಿರಿಯರ ಅಸಾನಿಧ್ಯವನ್ನು ಪರಿಣಿತ ಮಾಲೀಸುಗಾರರು ತುಂಬುತ್ತಾರೆ.

ಎಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿಸುವುದು ಸಂಪೂರ್ಣ ಶಾರೀರಿಕ ಬೆಳವಣಿಗೆಗಾಗಿಯಲ್ಲದೇ, ಮನೋರಂಜನೆಗಾಗಿಯಲ್ಲ. ಆದಕಾರಣ ಹಿತವಾದ, ನಾಜೂಕಾದ ಎಣ್ಣೆ ಮಾಲೀಶು ಅತ್ಯಗತ್ಯ. ಹುಟ್ಟಿದ ಮಗುವಿನಿಂದ ಹಿಡಿದು ತೆವಳುವ / ಹರಿದಾಡುವ ಕಂದನನ್ನು ಎಣ್ಣೆ ಹಚ್ಚಿ ಮಾಲೀಶು ಮಾಡಿಯೇ ಸ್ನಾನ ಮಾಡಿಸಬೇಕು. ಆದರೆ ಅವರವರ ಪ್ರಾಯಕ್ಕೆ ತಕ್ಕಂತೆ ಮಾಲೀಶು ಮಾಡುವ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು.

ನವಜಾತ ಶಿಶುಗಳು ದಿನದ ಬಹಳ ಭಾಗವು ನಿದ್ರಿಸುವುದರಿಂದ ಕೇವಲ ಎಣ್ಣೆಯುಜ್ಜಿ ಸ್ನಾನ ಮಾಡಿಸಿದರೆ ಮಾತ್ರ ಸಾಕಾಗುತ್ತದೆ.  ಆದರೆ ಉಪಯೋಗಿಸುವ ಎಣ್ಣೆಯ ಸುಗಂಧ ಭರಿತವಾಗಿರುವಂತೆ ಗಮನಿಸಬೇಕು. ಮಾರುಕಟ್ಟೆಯಲ್ಲಿ ಮಗುವಿಗೆಂದೇ ತಯಾರಿಸಲ್ಪಡುವ ನಾನಾ ತರದ ಎಣ್ಣೆಗಳು ಲಭ್ಯವಿದೆ. ಮನೆಯಲ್ಲಿ ವಿಶೇಷ ರೀತಿಯಲ್ಲಿ ಮಕ್ಕಳಿಗೆಂದೇ ತಯಾರಿಸಲಾದ ಎಣ್ಣೆಯನ್ನೂ ಬಳಸಬಹುದು. ಮಕ್ಕಳನ್ನು ಚಾಪೆ ಅಥವಾ ದಪ್ಪನಾದ ವಸ್ತ್ರದ ಮೇಲೆ ಅಥವಾ ಚಾಚಿದ ನಿಮ್ಮ ಕಾಲುಗಳ ಮೇಲೆ ಮಲಗಿಸಿ ಮಸಾಜ್ ಮಾಡಬಹುದು .  

ಕಲಿಯಲು ಇಚ್ಛಿಸುವವರಿಗೆ ಮಕ್ಕಳನ್ನು ಮಾಲೀಶು ಮಾಡುವುದು ಹೇಗೆಂದು ತೋರಿಸುವ ವಿಡಿಯೋಗಳು ಯೂಟ್ಯೂಬ್ ನಲ್ಲಿ ಧಾರಾಳವಾಗಿ ಲಭ್ಯವಿದೆ .

ನವಜಾತ ಶಿಶುಗಳಿಗೆ, ಹಾಲು ಕರೆಯುವಂತೆ ಕೈ ಕಾಲುಗಳನ್ನು ಮೇಲಿನಿಂದ ಕೆಳ ಭಾಗದವರೆಗೆ ತಡವಬಹುದು. ಕೈ ಕಾಲುಗಳ ಬೆರಳುಗಳನ್ನು ನೀಳವಾಗಿ ಅವುಗಳ ತುದಿಯವರೆಗೂ ಸೌಮ್ಯವಾಗಿ ಎಳೆದುಕೊಳ್ಳಿ. ಅದರೊಂದಿಗೆ ಎದೆ ಹಾಗೂ ಬೆನ್ನನ್ನು ವೃತ್ತಾಕಾರದಲ್ಲಿ ಬಹಳ ಕೋಮಲವಾಗಿ ಉಜ್ಜಬಹುದು.ಮಗುವು ಬೆಳೆದಂತೆಲ್ಲಾ ಶರೀರವನ್ನು ಉಜ್ಜುವ ವಿಧಾನವನ್ನೂ ಬದಲಾಯಿಸಿಕೊಳ್ಳಬೇಕು. ಮಗುವನ್ನು ಮಾಲೀಶು ಮಾಡುವಾಗಲೆಲ್ಲ ಮಗುವಿನೊಂದಿಗೆ ಮಾತನಾಡುವುದು, ಎತ್ತಿಕೊಂಡು ಮುದ್ದಿಸುವುದು, ಲಾಲಿಸುವುದನ್ನು ಮಾಡಬೇಕಾಗುತ್ತದೆ.

ಬೆಳೆಯುತ್ತಿರುವ ಮಗುವಿಗೆ ಎಣ್ಣೆ ಮಾಲೀಶು ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.

(೧)ಕಾಲು:

ಹಸ್ತದಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಮಗುವಿನ ತೊಡೆಯಿಂದ ಪ್ರಾರಂಭಿಸಿ, ಕಾಲ್ಬೆರಳುಗಳ ವರೆಗೆ ಹಾಲು ಕರೆಯುವಂತೆ ಮೃದುವಾಗಿ ತೀವುತ್ತಾ ಬನ್ನಿರಿ. 

(೨) ಪಾದ :

ಹೆಬ್ಬೆರಳನ್ನು ಉಪಯೋಗಿಸಿ ಕಾಲಿನ ಪಾದದ ಅಡಿಗೆ ವೃತ್ತಾಕಾರವಾಗಿ ತಿರುಗಿಸಿ. 

(೩) ಬೆರಳುಗಳು :

ಕೋಮಲವಾಗಿ ಹಾಗೂ ಮೃದುವಾಗಿ ಕಾಲಿನ ಪ್ರತಿಯೊಂದು ಬೆರಳುಗಳನ್ನು ಕೈಯಿಂದ ಜಾರುವ ತನಕ ಮೃದುವಾಗಿ ಎಳೆದುಕೊಳ್ಳಿ. 

(೪) ಕೈಗಳು :

ಕಂಕುಳಿನ ಭಾಗದಿಂದ ಪ್ರಾರಂಭಿಸಿ ಹಾಲು ಕರೆಯುವ ರೀತಿಯಲ್ಲಿ, ಮೃದುವಾಗಿ ಎಣ್ಣೆಯಿಂದ

ಉಜ್ಜುತ್ತಾ ಕೆಳಭಾಗಕ್ಕೆ, ಕೈಬೆರಳುಗಳ ತನಕ ಬಂದು, ಬೆರಳುಗಳನ್ನು ಮೃದುವಾಗಿ ನೀವಿರಿ. 

(೫) ಮಣಿಕಟ್ಟು :

ಮಣಿಕಟ್ಟನ್ನು ಮೃದುವಾಗಿ ವೃತ್ತಾಕಾರದಲ್ಲಿ ತಿರುಗಿಸಿ . 

(೬) ಕೈಬೆರಳುಗಳು :

ಬಹಳ ನಿಧಾನವಾಗಿ ಹಾಗೂ ಹಿತವಾಗಿ ಒಂದೊಂದು ಬೆರಳನ್ನು ನಿಮ್ಮ ಕೈಯಿಂದ ಜಾರುವವರೆಗೂ ಹೊರಕ್ಕೆ ಎಳೆಯಿರಿ. 

(೭) ಎದೆ :

ಎರಡು ಹಸ್ತಗಳನ್ನುಪಯೋಗಿಸಿ, ಎದೆಯನ್ನು ಮೃದುವಾಗಿ ವೃತ್ತಾಕಾರದಲ್ಲಿ, ಹೊರಭಾಗಕ್ಕೆ ತಿರುಗಿಸಿ. 

(೮) ಹೊಟ್ಟೆ :

ಹೊಟ್ಟೆಯನ್ನು ನಿಮ್ಮ ಎರಡು ಕೈಗಳಿಂದ ಮೃದುವಾಗಿ ವೃತ್ತಾಕಾರದಲ್ಲಿ ತಡವಿಕೊಳ್ಳಿ. 

(೯) ಹಿಂಭಾಗ :

ಮಗುವನ್ನು ಅದರ ಹೊಟ್ಟೆಯ ಮೇಲೆ ಕವುಚಿ ಮಲಗಿಸಿಕೊಳ್ಳಿ. ಬೆನ್ನೆಲುಬಿನ ಎರಡು ಭಾಗದಲ್ಲಿ ಹೊರಭಾಗಕ್ಕೆ ಮೇಲ್ಭಾಗದಿಂದ ಕೆಳಭಾಗದವರೆಗೆ ವೃತ್ತಾಕಾರವಾಗಿ ತಿರುಗಿಸಿ. 

(೧೦) ಪ್ರಷ್ಠ ಭಾಗ :

ಹೆಚ್ಚು ಒತ್ತಡವನ್ನೀಯದೇ, ಎಣ್ಣೆಯಿಂದ ವೃತ್ತಾಕಾರವಾಗಿ ಮಾಲೀಸು ಮಾಡಿರಿ. 

(೧೧) ಮುಖ :

ಹಣೆ,ಮೂಗು,ಗದ್ದ ಹಾಗೂ ಗಲ್ಲ ಗಳಿಗೆ ಮೃದುವಾಗಿ ಎಣ್ಣೆಯನ್ನು ಉಜ್ಜಿರಿ. ಆದರೆ, ಕಣ್ಣು ಕಿವಿ ಮೂಗಿನ ದ್ವಾರ ಹಾಗೂ ಬಾಯಿಯೊಳಗೆ ಎಣ್ಣೆಯು ಸೇರಿಕೊಳ್ಳದಂತೆ ಜಾಗ್ರತೆವಹಿಸಿರಿ. 

(೧೨) ತಲೆ :

ಎಲ್ಲಾ ಬೆರಳುಗಳನ್ನು ಉಪಯೋಗಿಸಿ ಬಹಳ ಮೃದುವಾಗಿ ಹಿತವಾಗಿ ತಲೆಗೆ ಎಣ್ಣೆಯನ್ನು ತಡವಿರಿ. 

ಎಣ್ಣೆಯಿಂದ ಮಾಡುವ ಮಾಲೀಶು ಮಗುವು ಗಟ್ಟಿಮುಟ್ಟಾಗಿ ಬೆಳೆಯಲು ಸಹಕರಿಸುವುದಲ್ಲದೇ, ಮಗುವಿಗೆ ಹಿತವಾದ ಆರಾಮವನ್ನೂ ನೀಡುವುದು.

ಮಗುವು ಮಲಗಿರುವಾಗ ಅಥವಾ ಊಟ ಮಾಡಿಸಿದ ತಕ್ಷಣವೇ ಮಾಲೀಸು ಮಾಡಬೇಡಿ.

ಮಾಲೀಶು ಮಾಡುವಾಗ, ತಾಯಿ ಮಗು ಇಬ್ಬರೂ ಆಹ್ಲಾದಿಸುವಂತಹ ವಾತಾವರಣ ಅತ್ಯಗತ್ಯ.

Leave a Reply

%d bloggers like this: