video-swabhavika-herige-1

ಗರ್ಭಿಣಿಯರಿಗೆ ಮತ್ತು ತಾಯಿ ಆಗಬೇಕೆಂದು ಇರುವವರಿಗೆ ನಾರ್ಮಲ್ ಡೆಲಿವರಿ ಎಂದರೆ ಹೇಗಿರುತ್ತದೆ? ಅದು ಹೇಗಾಗುತ್ತದೆ ಎಂಬುದರ ಬಗ್ಗೆ ಗೊಂದಲಗಳು ಮತ್ತು ಕುತೂಹಲ ಇರುತ್ತದೆ.

ನಾವು ನಾರ್ಮಲ್ ಡೆಲಿವರಿ ಹೇಗೆ ಆಗುತ್ತದೆ ಮತ್ತು ಮಗುವು ತಾಯಿಯ ದೇಹದಿಂದ ಹೊರಗಡೆ ಹೇಗೆ ಬರುತ್ತದೆ ಎಂಬುದರ ಬಗ್ಗೆ ಹಂತ ಹಂತವಾದ ಮಾಹಿತಿಯನ್ನ ಈಗಾಗಲೇ ಹಿಂದಿನ ಬ್ಲಾಗ್ ಗಳಲ್ಲಿ ಹೇಳಿದ್ದೆವು. ಈಗ ನಿಮಗೆ ಅನುಕೂಲವಾಗುವಂತೆ ಮತ್ತು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಆಗುವಂತೆ ನಾರ್ಮಲ್ ಡೆಲಿವರಿ ಪ್ರಕ್ರಿಯೆ ಹೇಗೆ ಆಗುತ್ತದೆ ಎಂಬುದಕ್ಕೆ ಈ ವೀಡಿಯೊವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ವೀಡಿಯೊದಲ್ಲಿ ಹೇಳಿರುವ ವಿಷಯಗಳನ್ನೇ ನಾವು ಕೂಲಂಕುಷವಾಗಿ ಬರೆದಿದ್ದೇವೆ, ನೀವು ಇದನ್ನ ಹಿಂದೆ ಓದದೆಯೇ ಇದ್ದಿದ್ದರೆ, ವೀಡಿಯೊ ನೋಡಿ ನಂತರ ಕೆಳಗಿನದ್ದನ್ನು ಓದಿ.

 

ಹೆರಿಗೆ ನೋವನ್ನು ನಾವು ಮಗುವು ಜನನ ತಾಳುವ ಮುನ್ನ ಬರುವ ಸಂಕೋಚನಗಳು(contractions) ಎನ್ನಬಹುದು. ಆದರೆ ಇದು ನೀವು ನಿಮ್ಮ ಗರ್ಭಕೋಶವನ್ನ ಹೊರಹಾಕುವವರೆಗೆ ಮುಂದುವರೆಯುತ್ತದೆ.

ಮೊದಲ ಹಂತ :

ಇದು ನಿಮ್ಮ ಗರ್ಭಕೋಶದ ಕಂಠ, ಅಂದರೆ ಗರ್ಭಕಂಠವು ತೆರೆದುಕೊಳ್ಳುವ ಮೂಲಕ ಶುರು ಆಗುತ್ತದೆ. ಗರ್ಭಕೋಶವು ನಿಯಮಿತವಾಗಿ ಬಿಗಿಯಾಗುತ್ತಾ ಹೋಗಲು ಶುರು ಮಾಡುತ್ತದೆ. ಕಾಲಕ್ರಮೇಣ ಈ ಸಂಕೋಚನಗಳು ಹೆಚ್ಚೆಚ್ಚು ನೋವು ಮಾಡುತ್ತಾ ಹೋಗುತ್ತವೆ. ಗರ್ಭಕಂಠವು ತೆರೆದುಕೊಳ್ಳುತ್ತಾ ಹೋದಹಾಗೆ, ನಿಮ್ಮ ಸೊಂಟದಲ್ಲಿ ಅದರ ಸ್ಥಾನವು ಬದಲಾಗುತ್ತಾ ಹೋಗುತ್ತದೆ. ಅದು ಮುಂದೆ ಬರುತ್ತದೆ ಹಾಗು ಮೆತ್ತಗೆ ಆಗುತ್ತದೆ. ಹೀಗೆ ಅದು ಹೆಚ್ಚು ತೆಳುವಾಗಿ ಸ್ಪ್ರಿಂಗ್ ನಂತೆ ಆಗುತ್ತದೆ. ಈಗ ಮೊದಲ ಹಂತದಿಂದ ಎರಡನೇ ಹಂತಕ್ಕೆ ಹೋಗುವಾಗ, ನಿಮ್ಮ ಗರ್ಭಕಂಠವು 8 ಸೆಂಟಿಮೀಟರ್ ಇಂದ 10 ಸೆಂಟಿಮೀಟರ್ ಗೆ ಹಿಗ್ಗುತ್ತದೆ. ಸಂಕೋಚನಗಳು ಒಂದು ನಿಮಿಷ ಅವಧಿಯದ್ದು ಆಗಿರಬಹುದು ಹಾಗು ಇವು ಪ್ರತಿ 2-3 ನಿಮಿಷಗಳಿಗೆ ಒಮ್ಮೆ ಕಾಣಿಸುತ್ತವೆ. ಈ ಸಮಯದಲ್ಲಿ ನಿಮಗೆ ನಡುಕ, ಅಸ್ವಸ್ತತೆ ಉಂಟಾಗುವಂತೆ ಆಗಬಹುದು. ಬಹಳಷ್ಟು ಮಹಿಳೆಯರು ಈ ಮೊದಲ ಹಂತದಿಂದ ಎರಡನೇ ಹಂತಕ್ಕೆ ಹೋಗುವ ಸಮಯವೇ ಅತ್ಯಂತ ನೋವು ಉಂಟು ಮಾಡುವ ಸಮಯ ಎನ್ನುತ್ತಾರೆ.

ಎರಡನೇ ಹಂತ :

ನಿಮ್ಮ ಗರ್ಭಕಂಠವು 10 ಸೆಂಟಿಮೀಟರ್ ಗೆ ಹಿಗ್ಗಿದಾಗ ಈ ಹಂತ ಶುರುವಾಗುತ್ತದೆ. ನಿಮಗೆ ಈ ಸಮಯದಲ್ಲಿ ಮಗುವನ್ನ ಹೊರಗಡೆ ತಳ್ಳುವಂತೆ ಅನಿಸುವುದು. ನಿಮ್ಮ ಮಗುವು ಕಾಲಕ್ರಮೇಣ ಜನನದ ನಾಳದಿಂದ ಹೊರದಿಕ್ಕಿನಲ್ಲಿ ಜಾರುತ್ತಾ ಬರುತ್ತದೆ. ಮೊದಲ ಹಂತದ ಕೊನೆಯಲ್ಲಿ ಸ್ವಲ್ಪ ಸಮಯದವರೆಗೆ ಸಂಕೋಚನಗಳು ನಿಲ್ಲುತ್ತವೆ. ಈ ಸಮಯದಲ್ಲಿ ನೀವು ಮತ್ತು ನಿಮ್ಮ ಮಗುವು ಸ್ವಲ್ಪ ವಿಶ್ರಮಿಸಬಹುದು. ಸಂಕೋಚನಗಳು ಮತ್ತೆ ಶುರುವಾದಾಗ, ನಿಮ್ಮ ಮಗುವಿನ ತಲೆಯು ನಿಮ್ಮ ಕಾಲುಗಳ ಮಧ್ಯೆ ಇರುವಂತೆ ಹಾಗು ಒತ್ತಡ ಹೇರುತಿರುವಂತೆ ಅನಿಸುತ್ತದೆ. ಪ್ರತಿಯೊಂದು ಸಂಕೋಚನ ಹಾಗು ಪ್ರತಿಯೊಂದು ತಳ್ಳುವಿಕೆಗೆ ನಿಮ್ಮ ಮಗುವು ಸ್ವಲ್ಪಸ್ವಲ್ಪವೇ ಹೊರಗಡೆ ಬರುತ್ತಾ ಹೋಗುತ್ತದೆ, ಆದರೆ ಸಂಕೋಚನಗಳು ನಿಂತೊಡನೆ ನಿಮ್ಮ ಮಗುವು ಮತ್ತೆ ಒಳಗಡೆ ಹೋಗಿಬಿಡುತ್ತದೆ! ಗಾಬರಿಗೊಳ್ಳಬೇಡಿ. ಮಗುವು ಸ್ವಲ್ಪಸ್ವಲ್ಪವಾಗಿಯೇ ಮುಂದೆ ಬಂದರೂ ಸಾಕು. ವೈದ್ಯರು, ನರ್ಸ್ ಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಕೂಡ ನಿಮಗೆ ಸಂಕೋಚನ ಆಗುವಾಗ ಇನ್ನೂ ಜೋರಾಗಿ ತಳ್ಳುವಂತೆ ಪ್ರಚೋದಿಸಬಹುದು. ನಿಮಗೆ ಈ ಮುಚೆಯೇ ಒಮ್ಮೆ ಹೆರಿಗೆ ಆಗಿದ್ದರೆ, ಎರಡನೇ ಹಂತ ಕೇವಲ 5-10 ನಿಮಿಷಗಳು ತೆಗೆದುಕೊಳ್ಳಬಹುದು ಅಷ್ಟೇ. ಇದು ನಿಮ್ಮ ಮೊದಲ ಮಗುವಾಗಿದ್ದರೆ, ಈ ಹಂತವು ಹಲವು ಘಂಟೆಗಳು ಆಗಬಹುದು.

ಮೂರನೇ ಹಂತ :

ಈ ಹಂತದಲ್ಲಿ ನೀವು ನಿಮ್ಮ ಗರ್ಭಚೀಲವನ್ನ ಹೊರಗೆ ಹಾಕುತ್ತೀರ. ಮಗು ಜನನ ಹೊಂದಿದ ನಂತರದ ಕೆಲವು ನಿಮಿಷಗಳಲ್ಲಿ ಸಂಕೋಚನಗಳು ಮತ್ತೆ ಶುರುವಾಗುತ್ತವೆ, ಆದರೆ ಇವುಗಳು ಅಷ್ಟೊಂದು ತೀವ್ರವಾಗಿ ಇರುವುದಿಲ್ಲ. ಈ ಸಂಕೋಚನಗಳು ನಿಮ್ಮ ಗರ್ಭಚೀಲವನ್ನ ನಿಮ್ಮ ಗರ್ಭಕೋಶದ ಗೋಡೆಯಿಂದ ಉದುರುವಂತೆ ಮಾಡುತ್ತದೆ. ಹಾಗೆ ಅಂಟಿಕೊಂಡಿದ್ದು ಬಿಚ್ಚಿಕೊಂಡು ಉದುರಿದ ನಂತರ ನಿಮ್ಮ ಉದರದ ಕೆಳಭಾಗಕ್ಕೆ ಬಂದು ನಿಲ್ಲುತ್ತದೆ.

ನಿಮಗೆ ಇದನ್ನ ಹೊರಗಡೆ ತಳ್ಳಬೇಕು ಎಂದು ಅನಿಸಬಹುದು. ಖಾಲಿಯಾದ ನೀರಿನ ಚೀಲಗಳ ಪದರಗಳು ಗರ್ಭಚೀಲಕ್ಕೆ ಅಂಟಿರುತ್ತವೆ. ಇವೆರೆಡು ನಿಮ್ಮ ಯೋನಿಯಿಂದ ಹೊರಗಡೆ ಬರುತ್ತವೆ. ಗರ್ಭಚೀಲವನ್ನ ಹೊರಗಡೆ ತೆಗೆಯಲಿಕ್ಕೆ ಸಾಧಾರಣವಾಗಿ 15 ನಿಮಿಷಗಳಿಗಿಂತ ಕಮ್ಮಿ ಸಮಯ ಬೇಕಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಒಂದು ಘಂಟೆಯವರೆಗೆ ಆಗಬಹುದು. ನಂತರ ನಿಮ್ಮ ವೈದ್ಯರು ಗರ್ಭಚೀಲವನ್ನ ಹಾಗು ಅದರೊಂದಿಗೆ ಅಂಟಿಕೊಂಡ ನೀರಿನ ಚೀಲಗಳ ಪದರಗಳನ್ನ ಪರಿಶೀಲಿಸಿ, ಮತ್ತೆ ಏನು ಒಳಗಡೆಯೇ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವರು. ನಿಮ್ಮ ಗರ್ಭಕೋಶವು ರಕ್ತಸ್ರಾವ ತಡೆಯಲಿಕ್ಕೆ ಪುನಃ ಬಿಗಿಯಾಗುತ್ತಿದೆಯೇ ಎಂದು ನೋಡಲಿಕ್ಕೆ ವೈದ್ಯರು ನಿಮ್ಮ ಹೊಟ್ಟೆಯನ್ನ ಮುಟ್ಟಿ ಗಮನಿಸುವರು.

Leave a Reply

%d bloggers like this: