ನಿಮ್ಮ ಮಗುವು ನಿಮ್ಮನ್ನು ಹೇಗೆ ಗುರುತಿಸುತ್ತದೆ ಗೊತ್ತಾ?

ಜನಿಸಿದ ಮಕ್ಕಳ ದೃಷ್ಟಿಯು ಅಸ್ಪಷ್ಟ ಹಾಗೂ ಮಂಜು ಮಂಜಾಗಿರುತ್ತದೆ.ಮಕ್ಕಳಿಗೆ ಉತ್ತಮ ನೋಟವು ಗೋಚರವಾಗಲು ಕೆಲವು ವಾರಗಳಿಂದ ಹಿಡಿದು ಮಾಸಗಳ ಸಮಯ ಬೇಕಾಗುವುದು. ಜನನದ ಸಮಯದಲ್ಲಿ ಮಕ್ಕಳು ತಮ್ಮ ಸನಿಹದಲ್ಲಿರುವ ವಸ್ತುಗಳನ್ನು ಮಾತ್ರ ದೃಷ್ಟಿಸುತ್ತಾರೆ. ಸ್ವಲ್ಪ ದೂರದಲ್ಲಿರುವ ವಸ್ತುಗಳ ಹೊರವಲಯ ಅಥವಾ ಆಕೃತಿಗಳು ಮಾತ್ರ ಮಕ್ಕಳಿಗೆ ಗೋಚರಿಸುವುದು. ಮಕ್ಕಳ ದೃಷ್ಟಿಯು ಮೊದಲ ಕೆಲವು ಮಾಸಗಳಲ್ಲಿ ಬಹಳ ಚುರುಕಾಗಲು ಪ್ರಾರಂಭಿಸುವುದು.ನೀವು ಒಂದೆರಡು ವಾರಗಳಲ್ಲೇ ಇದನ್ನು ಗಮನಿಸಬಹುದು.

ಮೊದಲ ಒಂದು ಅಥವಾ ಎರಡನೇ ವಾರಗಳಲ್ಲೇ ಮಗುವು ಒಂದು ಅಡಿ ದೂರದಲ್ಲಿರುವ ವಸ್ತುಗಳನ್ನು ಗುರುತಿಸುತ್ತದೆ. ಆದರೆ, ಕೇವಲ ಕೆಲವು ಕ್ಷಣಗಳು ಮಾತ್ರ ಮಕ್ಕಳಿಗೆ, ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಾಗುವುದು.ನೀವು ಮಕ್ಕಳಿಗೆ ಎದೆ ಹಾಲುಣಿಸುವಾಗ ಮಗುವು ನಿಮ್ಮನ್ನು ತದೇಕಚಿತ್ತವಾಗಿ ನೋಡುವುದರ ಗುಟ್ಟು ಈಗ ಅರ್ಥವಾಯಿತಲ್ಲ..!! ಈ ಅವಧಿಯಲ್ಲಿ ಮಗುವಿನಲ್ಲಿ ಕೇವಲ ಕಪ್ಪು ಬಣ್ಣವನ್ನು ಗುರುತಿಸಲಿರುವ ಕ್ಷಮತೆ ಮಾತ್ರವೇ ಹೊಂದಿರುವುದು. ಆದುದರಿಂದ ಬಣ್ಣದ ವಸ್ತುಗಳನ್ನು ಗುರುತಿಸಲು ಸಾಧ್ಯವಾಗದು. ಎರಡನೇ ವಾರಗಳಿಗೆ ಕಾಲಿರಿಸುವಾಗ, ಗುರುತಿಸುವ ಸಾಮರ್ಥ್ಯವೂ ಅಭಿವೃದ್ಧಿಗೊಳ್ಳುತ್ತದೆ. ಈ ಅವಧಿಯಲ್ಲಿ ಮಗುವು ನಿಮ್ಮ ಮುಖವನ್ನು ಗುರುತಿಸಲು ಪ್ರಾರಂಭಿಸುತ್ತದೆ. ಮಗುವು ನಿಮ್ಮನ್ನು ನೋಡಿ ನಗಲು ಹಾಗೂ ನಿಮ್ಮ ಹತ್ತಿರ ಬರಲು ಹವಣಿಸುತ್ತಿದೆ .

ನಂತರದ ಎರಡು ವಾರಗಳಲ್ಲಿ ಎಂದರೆ ಮೂರು ಮತ್ತು ನಾಲ್ಕನೇ ವಾರಗಳಲ್ಲೇ ಮಕ್ಕಳು ತಮ್ಮ ದೃಷ್ಟಿಯನ್ನು ಸ್ವಲ್ಪ ಹೆಚ್ಚು ಸಮಯಗಳವರೆಗೆ ಕೇಂದ್ರೀಕರಿಸಲು ಸಾಮರ್ಥ್ಯವನ್ನು ಹೊಂದಿರುತ್ತವೆ. ದೂರದ ವಸ್ತುಗಳನ್ನು ಗುರುತಿಸಲು ಸಾಧ್ಯವಾಗದಾದರೂ,ತಮ್ಮ ತಲೆಯನ್ನು ಅತ್ತಿತ್ತ ಹೊರಳಾಡಿಸಿ ತಮ್ಮ ಸುತ್ತಮುತ್ತಲ ವಸ್ತುಗಳನ್ನು ಅರಿಯುವ ಕುತೂಹಲವನ್ನು ವ್ಯಕ್ತಪಡಿಸುವರು. ಮಗುವು ಒಂದು ತಿಂಗಳ ಪ್ರಾಯವಾಗುವಾಗ ಮಗುವು ಬೆಳಕು, ಮೊದಲೇ ನೋಡಿದ ಆಕೃತಿಗಳು ಹಾಗೂ ಕೇಳಿದ ಶಬ್ದಗಳನ್ನು ಗುರುತಿಸಿ ಸ್ಪಂದಿಸಲು ತೊಡಗುತ್ತದೆ. ತಂದೆ ತಾಯಿಗಳ ಸಾನ್ನಿಧ್ಯವನ್ನು ಬಹಳ ಬೇಗನೇ ಅರಿತು ಕೊಳ್ಳುತ್ತದೆ. ಆದರೆ, ಅಪರಿಚಿತರೊಂದಿಗೆ ಸ್ಪಂದಿಸದೆಂದಲ್ಲ.

೨ ನೇ ತಿಂಗಳಿಗಾಗುವಾಗ, ಮಗುವು ತನ್ನ ಮುಂದೆ ಚಲಿಸುತ್ತಿರುವ ಆಕೃತಿಗಳನ್ನು ತಮ್ಮ ದೃಷ್ಟಿಯೊಂದಿಗೆ ಹಿಂಬಾಲಿಸುತ್ತದೆ. ತಲೆಯನ್ನು ಸಂಪೂರ್ಣವಾಗಿ ತಿರುಗಿಸುವ ಸಾಮರ್ಥ್ಯವನ್ನು ಕೂಡ ಪಡೆದುಕೊಳ್ಳುತ್ತದೆ. ಮಗುವಿನ ಮುಂದಿರಿಸಿದ ಆಟಿಕೆ ಅಥವಾ ನಿಮ್ಮ ಮುಖವನ್ನು ತಿರುಗಿಸಿದಂತೆಲ್ಲಾ ಮಗು ನಿಮ್ಮೊಂದಿಗೆ ಆಟವಾಡುವುದು ಹೇಗೆಂದು ತಿಳಿದಿರಲ್ಲಾ …!! ಈ ಪ್ರಾಯಗಳಡಿಯಲ್ಲಿ ಮಗುವಿನ ಬಣ್ಣದ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವೂ ಅಭಿವೃದ್ಧಿಗೊಂಡು ಮಗುವು ವಿವಿಧ ಬಣ್ಣಗಳನ್ನು ಗುರುತಿಸಲು ತೊಡಗುವುದು. ಪ್ರಾಥಮಿಕ ಬಣ್ಣಗಳತ್ತ ಮಕ್ಕಳು ಆಕರ್ಷಿತರಾಗುವುದನ್ನು ನೀವು ಗಮನಿಸಿರಬಹುದು. ಯಾಕೆಂದರೆ, ಮಗುವು ಪ್ರಾಥಮಿಕ ಬಣ್ಣಗಳನ್ನು ಮೊದಲಿಗೆ ಗುರುತಿಸುವುದು.

೩ ನೇ ಮಾಸಗಳತ್ತ ಕಾಲಿರಿಸಿದ ಮಗುವು ತಮ್ಮ ಕೋಣೆಯಲ್ಲಿರುವ ಎಲ್ಲ ವಸ್ತುಗಳತ್ತ ದೃಷ್ಟಿ ಹೊರಳಿಸಿ ಅವುಗಳನ್ನು ಗುರುತಿಸುತ್ತದೆ. ೪ ತಿಂಗಳಾಗುವಷ್ಟರಲ್ಲಿ ಎಲ್ಲ ಬಣ್ಣಗಳನ್ನು ಗುರುತಿಸುವಷ್ಟರ ಮಟ್ಟಿಗೆ ಮಗುವಿನ ದೃಷ್ಟಿಯೂ ಅಭಿವೃದ್ಧಿಗೊಂಡಿರುತ್ತದೆ. ಈ ಅವಧಿಯಲ್ಲಿ ಮಗುವಿಗೆ ಚಿತ್ರಗಳನ್ನು ತೋರಿಸುವುದರಿಂದ ಮಕ್ಕಳ ಗುರುತಿಸುವಿಕೆಯ ಸಾಮರ್ಥ್ಯವೂ ಹೆಚ್ಚಾಗುವುದು. ತಮ್ಮ ಸುತ್ತಮುತ್ತಲಿನ ಎಲ್ಲ ವಸ್ತುಗಳ ಜಾಡು ಹತ್ತಿ ನಡೆಯುವುದು ಮಕ್ಕಳು ದೂರದಲ್ಲಿ ತಮ್ಮನ್ನು ಆಕರ್ಷಿಸುವ ಆಟಿಕೆಗಳನ್ನು ಮತ್ತಿತರ ವಸ್ತುಗಳನ್ನು ಹಿಡಿಯಲು ಪ್ರಯತ್ನಿಸುವುದನ್ನು ನೀವು ಕಾಣಬಹುದು.

೫ ರಿಂದ ೬ ತಿಂಗಳು ಪ್ರಾಯವಾದ ಮಕ್ಕಳಲ್ಲಿ ಸಣ್ಣ ಸಣ್ಣ ವಸ್ತುಗಳನ್ನು ಗುರುತಿಸುವಷ್ಟರ ಮಟ್ಟಿಗೆ ದೃಷ್ಟಿ ಶಕ್ತಿಯೂ ಬೆಳೆಯುತ್ತದೆ. ೭ ತಿಂಗಳಾಗುವಾಗಲಂತೂ, ಸುಮಾರಾಗಿ ಕಾಣಿಸಿಕೊಳ್ಳುವ ಅಥವಾ ಅಡಗಿರುವ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ದಿನ ಕಳೆದಂತೆಲ್ಲಾ ಗುರುತಿಸುವಿಕೆಯ ಸಾಮರ್ಥ್ಯದಿಂದೊಡಗೂಡಿ, ಅಭಿವೃದ್ಧಿಗೊಳ್ಳುವ ಮಕ್ಕಳ ದೃಷ್ಟಿಯು ಹತ್ತು ತಿಂಗಳಾಗುವಷ್ಟರಲ್ಲಿ ಸಂಪೂರ್ಣವಾಗಿ ವಿಕಸಿಸಲ್ಪಟ್ಟಿರುತ್ತದೆ.

೧೧ ರಿಂದ ೧೨ ತಿಂಗಳಲ್ಲಿ ಮಗುವೇ ಗಾಜು ಮತ್ತು ಕಿಟಿಕಿಗಳನ್ನು ಕೂಡ ಗುರುತಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಈ ವಯಸ್ಸಿನ ಮಕ್ಕಳು ಕಣ್ಣಾಮುಚ್ಚಾಲೆಯಂತಹ ಆಟಗಳನ್ನು ಇಷ್ಟಪಡುತ್ತಾರೆ.

ಮಕ್ಕಳ ದೃಶ್ಯ ಶಕ್ತಿಯ ಅಥವಾ ಗುರುತಿಸುವ ಸಾಮರ್ಥ್ಯವೂ ಅಭಿವೃದ್ಧಿಗೊಳ್ಳುವುದು ಹೇಗೆಂದು ನೀವೀಗ ತಿಳಿದಿರಲ್ಲಾ…?? ಆದರೆ ಮಗುವಿನ ದೃಷ್ಟಿಯು ಸರಿಯಾದ ರೀತಿಯಲ್ಲಿ ಬೆಳವಣಿಗೆ ಆಗುತ್ತಿಲ್ಲವೆಂಬೇನಾದರೂ ಸಂದೇಹ ಬಂದರೆ, ನೀವು ಮಕ್ಕಳನ್ನು ನೇತ್ರರೋಗ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ವಿನಾಕಾರಣವಾಗಿ ನೀರು ಬರುತ್ತಿರುವುದು, ಬೆಳಕಿನ ಕಡೆಗೆ ಸೂಕ್ಷ್ಮ ರೀತಿಯ ಪ್ರತಿಕ್ರಿಯೆ, ತುರಿಸುವಿಕೆ, ಕಣ್ಣಿನ ಅಸ್ವಸ್ಥತೆ ಅಥವಾ ಕಣ್ಣಿನ ರಚನೆಯಲ್ಲಿ ಯಾವುದಾದರೂ ಏರುಪೇರುಗಳು ಇವೇ ಮೊದಲಾದ ಯಾವುದೇ ಎಚ್ಚರಿಕೆಯ ಕರೆಗಳನ್ನು ಗಮನಿಸಿದರೆ ನೇತ್ರರೋಗ ತಜ್ಞರಲ್ಲಿ ಪರೀಕ್ಷೆ ಮಾಡಿಸಲೇಬೇಕು . ಕಣ್ಣಿನ ಯಾವುದೇ ಸಮಸ್ಯೆಗಳನ್ನು ಬೇಜವಾಬ್ದಾರಿಯಿಂದ ಬಿಟ್ಟು ಬಿಡಬಾರದು. ಮುಂದೆ ಅವುಗಳು ಪರಿಹರಿಸಲಾಗದ ಸಮಸ್ಯೆಗಳಿಗೆ ದಾರಿಯಾಗುತ್ತದೆ.

Leave a Reply

%d bloggers like this: