೫ ನಿಮಿಷದಲ್ಲಿ ಆರೋಗ್ಯಕರ ಮತ್ತು ರುಚಿಕರ ರಾಗಿ ಹಲ್ವಾ

ರಾಗಿ ಆರೋಗ್ಯಕ್ಕೆ ಒಳ್ಳೆಯದು, ಅದು ದೇಹಕ್ಕೆ ಶಕ್ತಿ ಮತ್ತು ಪೌಷ್ಟಿಕಾಂಶಗಳನ್ನು ನೀಡುತ್ತದೆ ಎಂಬುದು ನಿಮಗೆ ಗೊತ್ತಿದೆ. ರಾಗಿ ಎಂದ ತಕ್ಷಣ ಎಲ್ಲರ ಮನಸ್ಸಲ್ಲೂ ಬರುವುದು ರಾಗಿ ಮುದ್ದೆ ಎಂಬುದು ನಿಜ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು ಆದರೆ, ರಾಗಿ ಮುದ್ದೆಯನ್ನು ಹೆಚ್ಚು ಜನರು ಸೇವಿಸಲು ಇಷ್ಟಪಡುವುದಿಲ್ಲ, ಅದರಲ್ಲೂ ಸಾಮಾನ್ಯವಾಗಿ ಮಕ್ಕಳು, ಆದರೆ ಆರೋಗ್ಯವಾಗಿರಲು ರಾಗಿ ಸೇವನೆ ತುಂಬಾ ಒಳ್ಳೆಯದು, ಮಕ್ಕಳು ರಾಗಿಯಲ್ಲಿರುವ ಪೌಷ್ಟಿಕಾಂಶಗಳನ್ನು ಪಡೆಯಲಿ ಎಂದು ಅವರಿಗೆ ಈ ತರಹದ ರುಚಿಯಾದ ತಿನಿಸುಗಳನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದರಿಂದ ಅವರ ಬಾಯಿಗೂ ರುಚಿ ಸಿಗುತ್ತದೆ ಮತ್ತು ಅವರ ಆರೋಗ್ಯಕ್ಕೂ ಒಳ್ಳೆಯದು.

ಇದರಲ್ಲಿ ಆರೋಗ್ಯಕರ ದೇಹಕ್ಕೆ ಬೇಕಾದ ಎಲ್ಲಾ ಪೋಷ್ಟಿಕಾಂಶಗಳು ಇವೆ. ರುಚಿಕರ ಮತ್ತು ಆರೋಗ್ಯಕರ ತಿನಿಸು ಬೇಕೆಂದರೆ ಇದನ್ನು ನೀವು ಮಾಡಬಹದು ಮತ್ತು ಇಲ್ಲಿ ಬಳಸಿರುವ ಪದಾರ್ಥಗಳು ನಿಮ್ಮ ಮನೆಯಲ್ಲಿಯೇ ಸಿಗುವಂತಹವು.

ಪದಾರ್ಥಗಳು

೧.ರಾಗಿಹಿಟ್ಟು

೨.ತುಪ್ಪ

೩.ಸೇಬು

ಸೂಚನೆ: ನಾವು ಇಲ್ಲಿ ಸಕ್ಕರೆಯನ್ನು ಬಳಸುತ್ತಿಲ್ಲ. ನಿಮಗೆ ಹೆಚ್ಚು ಸಿಹಿ ಬೇಕೆನಿಸಿದರೆ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿಕೊಳ್ಳಬಹುದು.

ಮಾಡುವ ವಿಧಾನ

೧.ಸೇಬನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗ ಮಾಡಿ ಅದರಲ್ಲಿರುವ ಬೀಜಗಳನ್ನು ತೆಗೆಯಿರಿ.

೨.ನಂತರ ಸೇಬನ್ನು ತುರಿದುಕೊಳ್ಳಿ, ಮತ್ತು ಅದನ್ನು ಮುಚ್ಚಿ ಪಕ್ಕದಲ್ಲಿ ಇಡಿ.

೩.ಒಂದು ಪಾತ್ರೆಗೆ ರಾಗಿಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗಂಟು ಅಥವಾ ಗುಳ್ಳೆ ಆಗದಂತೆ ಮಿಶ್ರಿಸಿ ಒಂದು ಹದಕ್ಕೆ ಬರುವಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

೪.ಚೆನ್ನಾಗಿ ಕಲಸಿದ ನಂತರ, ಆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಒಂದು ಹಲ್ಲೆ ಅಥವಾ ಸೌಟಿನಿಂದ ಅದನ್ನು ನಿರಂತರವಾಗಿ ತಿರುಗಿಸುತ್ತಿರಿ. ಇದರಲ್ಲಿ ಯಾವುದೇ ಗುಳ್ಳೆ ಅಥವಾ ಗಂಟು ಆಗದಂತೆ ನೋಡಿಕೊಳ್ಳಿ.

೫.ಇದಕ್ಕೆ ಈಗ ತುರಿದುಕೊಂಡಿರುವ ಸೇಬನ್ನು ಹಾಕಿ, ಮತ್ತು ಜೊತೆಗೆ ಇನ್ನು ಸ್ವಲ್ಪ ನೀರನ್ನು ಹಾಕಿ.

೬.ಇದನ್ನು ೪ ರಿಂದ ೫ ನಿಮಿಷ ಬೇಯಿಸಿ, ಮತ್ತು ಸೇಬು ಚೆನ್ನಾಗಿ ಬೆಂದಿದೆ ಎಂದು ಗಮನಿಸಿಕೊಳ್ಳಿ.

೭.ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿರುಗಿಸಿ ಒಂದು ನಿಮಿಷ ಬೇಯಲು ಬಿಡಿ. ಇದನ್ನು ಗಟ್ಟಿಯಾಗಲು ಅಥವಾ ಮಂದವಾಗಲು ಬಿಡಬೇಡಿ ಆರಿದ ನಂತರ ಅದೇ ಗಟ್ಟಿಯಾಗುತ್ತದೆ(ಗಟ್ಟಿಯಾಗುತ್ತಿದ್ದರೆ ನೋಡಿಕೊಂಡು ಸ್ವಲ್ಪ ನೀರು ಅಥವಾ ತುಪ್ಪವನ್ನು ಸೇರಿಸಿ).

ಸಲಹೆ

ಇದಕ್ಕೆ ನೀವು ಏಲಕ್ಕಿ ಪುಡಿಯನ್ನು ಸೇರಿಸಬಹುದು.

ನೀವು ಬೇಕಿದ್ದರೆ ಸೇಬನ್ನು ತುರಿದು ಹಾಕುವ ಬದಲು ಸೇಬನ್ನು ರುಬ್ಬಿ ಅದರ ರಸವನ್ನು ಸೇರಿಸಬಹುದು.

ಹೆಚ್ಚು ಸಿಹಿ ಬೇಕಿದ್ದರೆ ಬೆಲ್ಲವನ್ನು ಅಥವಾ ಸಕ್ಕರೆಯನ್ನು ಸೇರಿಸಿ.

ಇದಕ್ಕೆ ನೀವು ಗೋಡಂಬಿಯನ್ನು ಸೇರಿಸಬಹುದು.

Leave a Reply

%d bloggers like this: