ನೀವು ಸ್ವಾಭಾವಿಕ ಹೆರಿಗೆ ಮತ್ತು ಸಿಸೇರಿಯನ್ ಹೆರಿಗೆ ಬಗ್ಗೆ ತಿಳಿದಿರುತ್ತೀರ. ಆದರೆ ಅವುಗಳು ಭವಿಷ್ಯದಲ್ಲಿ ನಿಮ್ಮ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದು ನಿಮಗೆ ಗೊತ್ತೇ? ಈ ಪ್ರಶ್ನೆ ನನ್ನಲ್ಲೂ ಹುಟ್ಟಿಕೊಂಡಾಗ ನಾನು ಕೂಡ ಉತ್ತರವನ್ನು ಹುಡುಕುತ್ತಾ ಹೋದೆ. ಆದರೆ ತಿಳಿದು ಬಂದ ಒಂದು ವಿಷಯ ಎಂದರೆ ಹೀಗೆ ಆಗುತ್ತದೆ ಎಂದು ನಿಖರವಾಗಿ ಹೇಳಲು ಆಗದಿದ್ದರೂ, ಕೆಲವು ಅಧ್ಯಯನಗಳು ಸ್ವಾಭಾವಿಕ ಹೆರಿಗೆಯ ಮೂಲಕ ಜನಿಸಿದ ಮಕ್ಕಳು ಕೆಲವು ವಿಷಯಗಳಲ್ಲಿ ಸಿಸೇರಿಯನ್ ಹೆರಿಗೆಯ ಮೂಲಕ ಜನಿಸಿದ ಮಕ್ಕಳಿಗಿಂತ ಅದೃಷ್ಟಶಾಲಿಗಳು ಆಗಿರುತ್ತಾರೆ. ಅಂತಹ ಅಧ್ಯಯನಗಳ ಪಟ್ಟಿ ಇಲ್ಲಿದೆ ಓದಿ.
ಸ್ವಾಭಾವಿಕ ಹೆರಿಗೆಯ ಉಪಯೋಗಗಳು
೧. ಬ್ರಿಟಿಷ್ ಮೆಡಿಕಲ್ ಜರ್ನಲ್ ಅಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳಿಗೆ ಭವಿಷ್ಯದಲ್ಲಿ ಆಸ್ತಮಾ, ಸ್ಥೂಲಕಾಯತೆ, ಮಧುಮೇಹ ಅಥವಾ ಅಲರ್ಜಿಗಳಂತಹ ದೀರ್ಘಕಾಲದ ಅರೋಗ್ಯ ಸಮಸ್ಯೆಗಳು ಎದುರಿಸುವ ಅಪಾಯ ಹೆಚ್ಚು ಇರುತ್ತದೆ ಎಂದು ತತಿಳಿಸಿದ್ದಾರೆ. ಸ್ವಾಭಾವಿಕ ಹೆರಿಗೆಯ ವೇಳೆ ಮಾತ್ರ ಸಿಗುವ ಕೆಲವು ಉಪಯುಕ್ತ ಬ್ಯಾಕ್ಟೀರಿಯಾಗಳು, ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳಿಗೆ ಸಿಗದಿರುವ ಕಾರಣ, ಅವರಿಗೆ ಅಪಾಯ ಹೆಚ್ಚು ಎಂದು ತಿಳಿಸುತ್ತದೆ ಈ ಅಧ್ಯಯನದಲ್ಲಿನ ಪ್ರಮುಖ ಸಿದ್ದಾಂತ.
ಕೆನಡಾ ದೇಶದ ಪತ್ರಿಕೆ ಆದ “ದಿ ಗ್ಲೋಬ್ ಅಂಡ್ ಮೇಲ್” ಹೇಳುವುದು – ಮಗುವು ಮೊದಲ ಬಾರಿಗೆ ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುವುದು ಅದು ತನ್ನ ತಾಯಿಯ ಯೋನಿಯ ನಾಳದಿಂದ ಹೊರಬರುವ ವೇಳೆಯಲ್ಲಿ. ಈ ಸಮಯದಲ್ಲಿ ಮಗುವಿನ ಮೈಯೆಲ್ಲಾ ಬ್ಯಾಕ್ಟೀರಿಯಾಗಳಿಂದ ಮುತ್ತಿರುತ್ತದೆ. ಅವುಗಳಲ್ಲಿ ಕೆಲವು ಮಗುವಿನ ದೇಹವನ್ನು ಸೇರುತ್ತವೆ. ಆದರೆ ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳು ಈ ಬ್ಯಾಕ್ಟೀರಿಯಾಗಳ ಜೊತೆಗೆ ಸಂಪರ್ಕ ಹೊಂದುವ ಪ್ರಕ್ರಿಯೆಗೆ ಒಳಗಾಗದ ಕಾರಣ, ಅವರಿಗೆ ಈ ಉಪಯುಕ್ತ ಬ್ಯಾಕ್ಟೀರಿಯಾಗಳು ಲಭಿಸುವುದಿಲ್ಲ.
೨. ಸ್ವಾಭಾವಿಕ ಹೆರಿಗೆಯ ಮೂಲಕ ಜನಿಸಿದ ಮಕ್ಕಳಿಗೆ ಹುಟ್ಟಿದೊಡನೆ ಉಸಿರಾಟದ ತೊಂದರೆ ಉಂಟಾಗುವ ಅಪಾಯಗಳು ಕಡಿಮೆ. ಲೈವ್ ಸೈನ್ಸ್ ಮ್ಯಾಗಝಿನ್ ಪ್ರಕಾರ ಸ್ವಾಭಾವಿಕ ಹೆರಿಗೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸ್ನಾಯುಗಳು ನವಜಾತ ಶಿಶುವಿನ ಶ್ವಾಸಕೋಶದಲ್ಲಿನ ಎಲ್ಲಾ ದ್ರವ್ಯಗಳನ್ನ ಹೀರಿ ಹೊರಗಡೆ ಹಾಕುವುದರಿಂದ ಮಗುವಿಗೆ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಗಳು ಕಮ್ಮಿ ಇರುತ್ತವೆ.
ಸ್ವಾಭಾವಿಕ ಹೆರಿಗೆಯ ಅಪಾಯಗಳು
ಏತನ್ಮಧ್ಯೆ ನಾವು ಸ್ವಾಭಾವಿಕ ಹೆರಿಗೆಯಿಂದ ಉಂಟಾಗುವ ಅಪಾಯಗಳನ್ನ ಸಹ ಗಮನಿಸಬೇಕು. ಲೈವ್ ಸೈನ್ಸ್ ಮ್ಯಾಗಜಿನ್ ಪ್ರಕಾರ, ಸ್ವಾಭಾವಿಕ ಹೆರಿಗೆಯು ಮಕ್ಕಳಲ್ಲಿ ಸೆರೆಬ್ರಲ್ ಪಾಲ್ಸಿ, ಮೆದುಳು ಹಾನಿ, ಭುಜದ ಡಿಸ್ಟೋಶಿಯ (ಹೆರಿಗೆ ವೇಳೆ ಮಗು ಆಚೆ ಬರುವಾಗ, ತಲೆ ಹೊರಗೆ ಬಂದು ಭುಜ ಒಳಗಡೆ ಸಿಲುಕಿಕೊಂಡಾಗ, ಅದನ್ನು ಬಿಡಿಸಿಕೊಳ್ಳುವ ತರಾತುರಿ ಪ್ರಕ್ರಿಯೆಯಿಂದ ಮಗುವಿನ ಮೇಲೆ ಕಾಲಕ್ರಮೇಣ ಉಂಟಾಗುವ ಆರೋಗ್ಯದಲ್ಲಿನ ಸಮಸ್ಯೆಗಳು ) ಅಂತಹ ದೀರ್ಘಕಾಲದ ಪ್ರಭಾವ ಬೀರುವ ಸಮಸ್ಯೆಗಳನ್ನ ತರಬಹುದು.
ಈ ಭುಜದ ಡಿಸ್ಟೋಶಿಯಾ ಅನ್ನು ನೀವು ಗರ್ಭಧಾರಣೆಯ ಮಧುಮೇಹ (ಗೆಸ್ಟೇಶನಲ್ ಡಯಾಬಿಟಿಸ್) ಅನ್ನು ನಿಯಂತ್ರಣದಲ್ಲಿ ಇಡುವ ಮೂಲಕ ನಿವಾರಿಸಬಹುದು. ಮುಖ್ಯವಾಗಿ ದೊಡ್ಡ ದೇಹ ಹೊಂದಿರುವ ಮಕ್ಕಳ ಅಮ್ಮಂದಿರು ಇದರ ಬಗ್ಗೆ ಜಾಗೃತರಾಗಿರಬೇಕು.