ನಿಮ್ಮ ಆ ರಸಮಯ ಸಮಯದ ವೇಳೆ ಮಕ್ಕಳು ದಿಢೀರಾಗಿ ಮಧ್ಯ ಬಂದರೆ ಏನು ಮಾಡಬೇಕು?

ಕಡೆಗೂ ಏಕಾಂತ! ಮಕ್ಕಳನ್ನ ಮಲಗಿಸಿ, ಬೆಚ್ಚಗೆ ಹೊದಿಕೆ ಹೊದಿಸಿ, ಅವರಿಗೆ ಗುಡ್ ನೈಟ್ ಹೇಳಿ, ಈಗ ನಿಮ್ಮ ಪತಿಯ ಜೊತೆಗೆ ಸ್ವಲ್ಪ ಸುಮಧುರ ಕ್ಷಣಗಳನ್ನ ಕಳೆಯಬೇಕೆಂದು ಬಂದಿರುವಿರಿ. ಮಕ್ಕಳ್ಳನ್ನು ನೋಡಿಕೊಂಡು ಸುಸ್ತಾದರು, ಹೇಗೋ ಇನ್ನೂ ಎಚ್ಚರವಿದ್ದು ನಿಮ್ಮ ಆನಂದಕ್ಕೂ ಸ್ವಲ್ಪ ಸಮಯ ಕಳೆಯಬೇಕು ಎಂದುಕೊಂಡಿರುವಿರಿ.

ನೀವು ಅಂದುಕೊಂಡಂತೆ ಆ ಕಾರ್ಯದಲ್ಲಿ ಜಾರಿಕೊಂಡಿದ್ದೀರ. ಆ ಕ್ಷಣದಲ್ಲಿ ಮುಳುಗಿದ್ದೀರ. ಆದರೆ  ತಕ್ಷಣ ಯಾರೋ ನಡೆದುಕೊಂಡು ಬರುತ್ತಿರುವ ಸದ್ದು. ತಲೆ ಎತ್ತಿ ನೋಡಿದರೆ, ಬಾಗಿಲ ಬಳಿ ನಿದ್ದೆಗಣ್ಣಿನಲ್ಲಿ ನಿಮ್ಮ ಮಗು. ನಿಮ್ಮ ಮಗುವಿನ ಮುಖದ ಮೇಲೆ ಪ್ರಶ್ನೆಗಳನ್ನ ಕಾಣುತ್ತೀರಿ. ಅವನು ಏನೆಲ್ಲಾ ನೋಡಿರಬಹುದು, ಏನು ಅಂದುಕೊಂಡಿರಬಹುದು, ಏನು ಹೇಳುವುದು ಎಂಬ ನೂರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತವೆ.  

ಇಂತಹ ಮುಜುಗರದ ಸಮಯದಲ್ಲಿ ನೀವು ಏನು ಮಾಡಬೇಕು? ಮೊದಲು ನಿಮ್ಮ ಎಲ್ಲಾ ಯೋಚನೆಗಳನ್ನ ಒಂದು ಕ್ಷಣ ಹಿಡಿತಕ್ಕೆ ತನ್ನಿ. ಇತರೆ ಮುಜುಗರದ ಪರಿಸ್ಥಿತಿಗಳಲ್ಲಿ ಆಗುವಂತೆಯೇ ಇಲ್ಲಿಯೂ ಕೂಡ ನಿಮ್ಮ ಬಾಯಿಗೆ ಮೊದಲು ಬರುವ ಮಾತುಗಳು ಸಮಂಜಸವಾಗಿ ಇರುವುದಿಲ್ಲ. ಹೀಗಾಗಿ ಧೃತಿಗೆಡಬೇಡಿ. ಈ ಸಮಯದಲ್ಲಿ ನೀವು ಬೇಕಾದ್ದಕ್ಕಿಂತ ಹೆಚ್ಚಿಗೆ ಹೇಳುವುದು ಅಥವಾ ತಪ್ಪು ಮಾತುಗಳನ್ನು ಆಡುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಹೀಗಾಗಿ ಮನೋತಜ್ಞ ಶೆಲ್ಟನ್ ಅವರು ಹೇಳುವಂತೆ ಇಂತಹ ಸಮಯದಲ್ಲಿ ನೀವು ಒಂದು ಕ್ಷಣ ತಬ್ಬಿಬ್ಬಾಗದೆ, ಚಿಕ್ಕ ವಿರಾಮ ತೆಗೆದುಕೊಂಡು, ಯೋಚಿಸಿ.

ಎರಡನೆಯದು, ನಿಮ್ಮ ಮಗು ಎಲ್ಲವನ್ನೂ ನೋಡಿದೆ ಎಂದು ತಪ್ಪಾಗಿ ನೀವೇ ಊಹಿಸಿಕೊಳ್ಳಬೇಡಿ. ಪ್ರೈಮರಿ ಶಾಲೆಯ ಮಗುವಿಗೆ ಬಹುಷಃ ನೀವು ಹೊದಿಕೆಯ ಒಳಗೆ ಏನು ಮಾಡುತ್ತಿರುವಿರಿ ಎಂಬುದರ ಬಗ್ಗೆ ಅರಿವು ಕೂಡ ಇಲ್ಲದಿರಬಹುದು. ಹೀಗಾಗಿ ನೀವು ಮುಚ್ಚಿಕೊಳ್ಳಲು ಬೇಕಾದ್ದಕ್ಕಿಂತ ಹೆಚ್ಚಿನ ಸಮಜಾಯಿಷಿ, ವಿವರಣೆ ನೀಡಲು ಹೋದರೆ ಅವನನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತೀರ.

ಮಕ್ಕಳು ಇನ್ನಷ್ಟು ಚಿಕ್ಕವರಾಗಿದ್ದರೆ, ಅಂದರೆ 3-4 ವರ್ಷದವರಾಗಿದ್ದರೆ ಅವರಿಗೆ ನೀವು ಏನು ಮಾಡುತ್ತಿದ್ದೀರಾ ಎಂದು ತಿಳಿಯುವುದೇ ಇಲ್ಲ. ಇಂತಹ ಸಮಯದಲ್ಲಿ ನೀವು “ನಮಗೆ ಒಬ್ಬರೆಂದರೆ ಇನ್ನೊಬ್ಬರಿಗೆ ಇಷ್ಟ, ಅದಕ್ಕೆ ತಬ್ಬಿಕೊಳ್ಳುತ್ತಿದೆವು” ಎಂದು ಮುಗಿಸಬಹುದು.

ಈ ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು

೧. ನಿಮ್ಮ ರೂಮಿನ ಬಾಗಿಲ ಚಿಲಕ ಸರಿಯಾಗಿ ಹಾಕಿಕೊಳ್ಳಿ

೨. ತುಂಬಾ ತಪ್ಪಿತಸ್ಥರಂತೆ ವರ್ತಿಸಬೇಡಿ – ನಿಮ್ಮ ಮಗು ನಿಮ್ಮ ಮುಜುಗರ ನೋಡಿ, ನೀವು ಮಾಡಿದ್ದು ಕೆಟ್ಟ ಕೆಲಸ ಎಂದು ಅರ್ಥೈಸಿಕೊಳ್ಳಬಹುದು

೩. ಅವಸರದಲ್ಲಿ ಏನು ಹೇಳದೆ, ಮಗು ನೋಡಿದ ತಕ್ಷಣ ಒಂದು ಕ್ಷಣ ಸುಮ್ಮನೆ ನಿಮ್ಮ ಯೋಚನೆಗಳನ್ನ ಹಿಡಿತಕ್ಕೆ ತನ್ನಿ

೪. ಅವರ ವಯಸ್ಸಿಗೆ ಅರ್ಥ ಆಗುವ ಭಾಷೆಯಲ್ಲೇ ಏನಾದರೂ ಹೇಳಿ

೫. ನಿಮ್ಮ ಮಗುವು ಚಿಕ್ಕದಿದ್ದರೆ, ಬೇಕಾದ್ದಕ್ಕಿಂತ ಹೆಚ್ಚಿನ ವಿವರಣೆ ನೀಡಬೇಡಿ

೬. ನಿಮ್ಮ ಮಕ್ಕಳು ದೊಡ್ಡವರಾಗಿದ್ದು, ಅವರಿಗೆ ಈ ಸೂಕ್ಷ್ಮಗಳು ಅರ್ಥ ಆಗುತ್ತದೆ ಎಂದರೆ, ಅವರೊಂದಿಗೆ ಮುಕ್ತವಾಗಿಯೇ ಚರ್ಚಿಸಿ

೭. ಸಿಕ್ಕಿ ಹಾಕಿಕೊಂಡ ಮೇಲೆ ಏನು ಹೇಳದೆ ಸುಮ್ಮನಿರಬೇಡಿ. ಏಕೆಂದರೆ ನಿಮ್ಮ ಮಕ್ಕಳು ಅದನ್ನು ಮರುದಿನ ಮತ್ತೆ ಕೇಳಬಹುದು.

೮. ನಿಮ್ಮ ಮಗು ಹಾಗೆ ಮಧ್ಯದಲ್ಲಿ ಬಂದದ್ದು ತಪ್ಪಲ್ಲ ಎಂದು ಅವರಿಗೆ ತಿಳಿಸಿ. ಇಲ್ಲವಾದಲ್ಲಿ ಅವರಲ್ಲಿ ಸಂಶಯ ಮತ್ತು ಗೊಂದಲ ಹುಟ್ಟುತ್ತದೆ.

Leave a Reply

%d bloggers like this: