ಆದರ್ಶ ದಂಪತಿಗಳ ಐದು ನಡವಳಿಕೆಗಳು

ಸಂಗಾತಿಯೊಂದಿಗೆ ಸುಮಧುರ ಸಂಬಂಧವನ್ನು ಬಯಸದವರಾರು ? ಹಾಲು ಜೇನು ಸೇರಿಸಿದಂತಹ ಜೀವನಕ್ಕಾಗಿ ಏನನ್ನು ಮಾಡಲು ನಾವು ಸಿದ್ಧರಿಲ್ಲವೇ…?? ಜೀವನವನ್ನು ವರ್ಣರಂಜಿತವಾಗಿರಿಸಲು ಹರಸಾಹಸವನ್ನೇ ಮಾಡುವಾಗ ಕೆಲವು ಚಿಕ್ಕ ಚಿಕ್ಕ ವಿಷಯಗಳನ್ನು ನಾವು ಕಡೆಗಣಿಸುತ್ತೇವೆ. ಕೊನೆಗೆ ಕಡೆಗಣಿಸಿದ ಚಿಕ್ಕ ಸಂಗತಿಗಳೇ ಬೃಹತ್ ಆಕಾರವಾಗಿ ನಮ್ಮನ್ನೇ ನುಂಗಿ ಬಿಡುತ್ತವೆ.

ಆದರ್ಶ ಜೀವನ ನಡೆಸಲು ನೀವು ಗಮನಿಸಬೇಕಾದ ಮಹತ್ವಪೂರ್ಣ ಕಾರ್ಯಗಳ ಬಗ್ಗೆ ಕೆಲವು ಸಲಹೆಗಳು.

೧.ಕೆಲಸದ ಭಾರವನ್ನು ಮರೆಯಿರಿ

ಉದ್ಯೋಗ ನಿರತರಾದ ಬಹಳಷ್ಟು ದಂಪತಿಗಳು ಹಗಲು ಹೊತ್ತಿನಲ್ಲಿ ಪರಸ್ಪರ ಕಾಣುವುದೇ ಇಲ್ಲ. ಭೇಟಿಯಾಗಲು ಅವಕಾಶವಿರುವಂತಹ ರಾತ್ರಿ ವೇಳೆಯಲ್ಲಿ ತಮ್ಮ ಕೆಲಸದ ಜವಾಬ್ದಾರಿಯ ಬಗ್ಗೆಯೇ ಚಿಂತಿಸಿ ಸಂಗಾತಿಯ ಇರವನ್ನೂ ಮರೆಯುತ್ತಾರೆ. ಇಂತಹ ತಪ್ಪನ್ನು ಖಂಡಿತಾ ಆವರ್ತಿಸಬೇಡಿ. ನಿಮ್ಮ ಸಂಗಾತಿಯೊಂದಿಗಿನ ಕ್ಷಣಗಳನ್ನು ಸಂಪೂರ್ಣವಾಗಿ ಅವರಿಗೇ ಮೀಸಲಾಗಿಡಿ.

೨.ಜಗಳ ಮಾಡಬೇಡಿ

ಮಲಗುವ ಕೆಲವು ಸಮಯಗಳ ಮುನ್ನ ವಿನಾ ಕಾರಣ ಜಗಳ ಕಾಯುವುದು ದಂಪತಿಗಳು ಮಾಡುವ ಇನ್ನೊಂದು ತಪ್ಪು. ಇದರಿಂದ ಒಟ್ಟಿಗೆ ಒಂದೇ ಹಾಸಿಗೆಯ ಮೇಲೆ ಮಲಗಿದ್ದರೂ, ಮನಸ್ಸುಗಳಲ್ಲಿ ಬಿರುಕು ಬಿದ್ದು, ಅನಗತ್ಯವಾದ ಚಿಂತೆಗಳ ಬೀಡಾಗುತ್ತದೆ. ಆದಕಾರಣ ದಯವಿಟ್ಟು ಮಲಗುವ ಮುನ್ನ ಜಗಳ ಕಾಯುವುದನ್ನು ಬಿಟ್ಟುಬಿಡಿ. ಇದರಿಂದ ಗಮನಾರ್ಹ ಬದಲಾವಣೆಗಳು ಕಂಡು ಬರುತ್ತದೆ.

೩.ಮನಸ್ಸು ಬಿಚ್ಚಿ ಮಾತನಾಡಿ

ಮನಸ್ಸಿನಾಳದ ಅನಿಸಿಕೆಗಳನ್ನು ಪ್ರೀತಿ ಬೆರೆತ ಮಾತುಗಳಿಂದ ಅರುಹಿರಿ. ಇದರಿಂದ ನಿಮ್ಮ ಜೀವನವು ಅನಿವರ್ಚನೀಯ ಆನಂದದಲ್ಲಿ ಮುಳುಗುವುದು ಮಾತ್ರವಲ್ಲದೆ,ನಿಮ್ಮಿಬ್ಬರ ನಡುವಿನ ಪ್ರಣಯವೂ ಹೆಮ್ಮರವಾಗುವುದು.

೪.ಇಬ್ಬರೂ ಏಕ ಕಾಲಕ್ಕೇ ಶಯ್ಯಾಗಾರಕ್ಕೆ ಕಾಲಿಡಿ.

ಮಲಗುವ ಕೋಣೆಗೆ ನೀವಿಬ್ಬರೂ ಒಂದೇ ಸಮಯಕ್ಕೆ ಪ್ರವೇಶಿಸಬೇಕಾದದ್ದು ಅತ್ಯವಶ್ಯಕ. ಇಲ್ಲದಿದ್ದರೆ ಅವರು ಮಲಗುವ ಕೋಣೆಗೆ ಬರುವ ವೇಳೆಯಲ್ಲಿ, ನೀವು ಕುಂಭಕರ್ಣನಂತೆ ನಿದ್ರಿಸಿ ಗೊರಕೆ ಪಡೆಯುವುದು ಸಂಗಾತಿಯಲ್ಲಿ ಅವಗಣಿಸಿದ ಅಥವಾ ಏಕಾಂಗಿಯಾದ ಭಾವನೆಯನ್ನುಂಟು ಮಾಡಬಹುದು. ಆದ ಕಾರಣ ಗಂಡನೊಂದಿಗೇ ಇದ್ದು ಮನಸೋ ಇಚ್ಛೆ ಮಾತನಾಡಿದ ಬಳಿಕವೇ ನಿದ್ರಿಸಿರಿ.

೫.ಮಕ್ಕಳಿಗಾಗಿ ಪ್ರತ್ಯೇಕ ಮಲಗುವ ಕೋಣೆಯ ವ್ಯವಸ್ಥೆಯಿರಲಿ

ಹೌದು. ನಿಮ್ಮ ಮಕ್ಕಳ ಮೇಲೆ ನಿಮಗೆ ಅಪಾರ ಮಮತೆ ಇರಬಹುದು. ಆದರೆ ನಿಮ್ಮ ಪತಿಯೊಂದಿಗೆ ಏಕಾಂತವಾಗಿ ಕಳೆಯುವುದು ಜೀವನದ ಭದ್ರಬುನಾದಿಗೆ ಅಗತ್ಯವಾಗಿದೆ. ಇದಕ್ಕೆ ರಾತ್ರಿಯ ಏಕಾಂತ ಸಮಯವೇ ಸೂಕ್ತ. ಆದ ಕಾರಣ, ಮಕ್ಕಳನ್ನು ಅವರ ಕೋಣೆಯಲ್ಲಿ ಮಲಗಲು ಕಳುಹಿಸಿದರೆ ನಿಮಗೆ ನಿಮ್ಮ ಗಂಡನೊಂದಿಗೆ ಏಕಾಂತವಾಗಿ ಕಳೆಯಬಹುದಲ್ಲದೇ, ಮಕ್ಕಳನ್ನು ಅವರಷ್ಟಕ್ಕೆ ಮಲಗಲೂ ಪ್ರೋತ್ಸಾಹಿಸಿದಂತಾಗುವುದು. ಇವತ್ತಲ್ಲಾ ನಾಳೆ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಲೇ ಬೇಕಲ್ಲವೇ…?

ಇಡೀ ರಾತ್ರಿ ನಿಮ್ಮ ಪತಿಯೊಂದಿಗೆ ಏಕಾಂತವಾಗಿ ಕಳೆಯುವ,ಪತಿಯ ಪ್ರೀತಿಯ ಅಪ್ಪುಗೆಯಲ್ಲಿ ನಿಮ್ಮನ್ನು ನೀವೇ ಮರೆಯುವ, ಪ್ರಣಯ ಜೋಡಿಯಂತೆ ನೂರು ಕಾಲ ಬಾಳುವ ವರದಾನ ನಿಮಗೆ ಲಭಿಸಲಿ.

Leave a Reply

%d bloggers like this: