ಹಾಲು ಕುಡಿಯುವಾಗ ಮಗು ಕಚ್ಚುತ್ತದೆಯೇ? ಹಾಗಿದ್ದರೆ ನೀವು ಇದನ್ನ ಓದಬೇಕು !

೬-೮ ತಿಂಗಳುಗಳಿಗಿಂತಲೂ ಹೆಚ್ಚು ತಿಂಗಳುಗಳ ಕಾಲ ತಮ್ಮ ಮಗುವಿಗೆ ಎದೆಹಾಲುಣಿಸಬೇಕೆಂದು ಕೆಲವು ತಾಯಿಯರು ನಿರ್ಧರಿಸಿರುತ್ತಾರೆ. ಇಂತಹ ತೀರ್ಮಾನಗಳು ಮಗುವು ಅನಾರೋಗ್ಯಕರವಾದ, ಚುಚುಮದ್ದು ನೀಡಲ್ಪಟ್ಟ ಹಣ್ಣು ತರಕಾರಿಗಳು ಹಾಗೂ ಇನ್ಫೆಕ್ಷನ್ ಮತ್ತು ಅಜೀರ್ಣಕ್ಕೆ ಕಾರಣವಾಗುವಂತಹ ಆಹಾರಗಳ ಸೇವನೆಗೆ ಕಡಿವಾಣವೆಸೆಯುತ್ತದೆ. ನಿಮ್ಮ ಮಗುವಿನ ರೋಗ ಪ್ರತಿರೋಧಕ ಶಕ್ತಿ ಇನ್ನೂ

ಪರಿಣಾಮಕಾರಿಯಾಗಿ ಬೆಳೆಯಲಿಲ್ಲವೆಂಬುದನ್ನು ನೀವೆಂದೂ ಮರೆಯಬಾರದು. ಬಹಳ ಕಾಲದವರೆಗೆ ಮಗುವಿಗೆ ಮೊಲೆಯುಣಿಸುವುದು,ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಮಾತ್ರವಲ್ಲ ನಿಮ್ಮನ್ನು ಮಾರಕ ಸ್ತನ ಕ್ಯಾನ್ಸರ್ ಬರದಂತೆಯೂ ತಡೆಯಬಲ್ಲದು.

ಆದರೆ, ೬-೯ ತಿಂಗಳು ಪ್ರಾಯವಾದ ನಿಮ್ಮ ಪುಟಾಣಿಗೆ ಹಲ್ಲು ಬೆಳೆಯುವ ಸಮಯವಾದ ಕಾರಣ ಅಂತಹ ಸಮಯದಲ್ಲಿ ಎದೆಹಾಲುಣಿಸುವುದು ಕೆಲವೊಮ್ಮೆ ನೋವಿಗೆ ಕಾರಣವಾಗುತ್ತದೆ. ಆದ ಕಾರಣ ಎರಡು ವರ್ಷಗಳವರೆಗೆ ಮಗುವಿಗೆ ಮೊಲೆಯೂಡಿಸಲು ಬೇಕೆಂದು ಉಪದೇಶಿಸುತ್ತಾರಾದರೂ,ನಲವತ್ತು ವಾರಗಳ ನಂತರ ತಾಯಿಯರು ಮಗುವಿಗೆ ಎದೆಹಾಲು ಕುಡಿಸುವುದನ್ನು ನಿಲ್ಲಿಸಿಬಿಡುತ್ತಾರೆ.

ಎದೆ ಹಾಲೂಡಿಸುವ ಸಮಯದಲ್ಲಿ ಮಕ್ಕಳು ಕಡಿಯುವುದು ಸರ್ವೇ ಸಾಮಾನ್ಯ ಹಾಗೂ ಎಲ್ಲಾ ತಾಯಿಯಂದಿರು ಅದನ್ನು ಅನುಭವಿಸಿರುತ್ತಾರೆ. ಆದರೂ ಮೊಲೆಯೂಡಿಸುವ ಸಮಯದಲ್ಲಿ ಮಕ್ಕಳ ಕಡಿತವನ್ನು ತಡೆಯಲು ಖಂಡಿತ ಸಾಧ್ಯವಿದೆ. ಮಗುವಿಗೆ ಹಲ್ಲು ಮೊಳಕೆ ಬರಲು ಶುರುವಾಗುವ ಹಂತದಲ್ಲಿ ಎದೆ ಹಾಲೂಡಿಸುವುದನ್ನು ನಿಲ್ಲಿಸುವ ಬಯಕೆಯಾದರೂ, ಅದರ ಅಗತ್ಯವಿನ್ನು ಬೀಳುವುದಿಲ್ಲ…ಹೇಗೆಂದು ತಿಳಿದುಕೊಳ್ಳಿ.

(೧) ಹಾಲು ಕುಡಿಯುವ ಗೋಜಿನಲ್ಲಿರುವ ಮಗುವು ಎಂದಿಗೂ ಕಡಿಯಲಾರದು

ಸರಾಗವಾಗಿ ಮೊಲೆಹಾಲು ಒಸರುತ್ತಿರುವಾಗ,ಮಗುವಿಗೆ ನಿಮ್ಮನ್ನು ಕಡಿಯಲಾಗದು. ನಿಮ್ಮ ಮೊಲೆ ತೊಟ್ಟಿನಿಂದ ಒಂದಿಂಚಿನಷ್ಟು ಹಿಂಭಾಗದಲ್ಲಿ ಮಗುವಿನ ಹಲ್ಲು ಬರುವಂತಹ ರೀತಿಯಲ್ಲಿ ಮಗುವನ್ನು ಎತ್ತಿಕೊಳ್ಳುವುರಿಂದ, ಮಗುವಿನ ನಾಲಗೆಯು ಹಲ್ಲಿನ ಮೇಲ್ಭಾಗವನ್ನು ಆವರಿಸುತ್ತದೆ. ಆದಕಾರಣ ಮಗುವನ್ನು ಹಾಲೂಡಿಸುವ ಸರಿಯಾದ ಭಂಗಿಯನ್ನು ಅರಿತುಕೊಂಡು ಅದರಂತೆ ಮೊಲೆಯೂಡಿಸಿದರೆ, ಮಗುವಿಗೆ ಕಡಿಯಲು ಸಾಧ್ಯವಾಗುವುದಿಲ್ಲ. 

(೨) ಮಗುವನ್ನು ದೂರವಾಗಿರಿಸಬೇಡಿ

ಮಗುವಿನ ಬಾಯೊಳಗೆ ಮೊಲೆ ತೊಟ್ಟುಗಳು ಸರಿಯಾಗಿ ಪ್ರವೇಶಿಸದಿದ್ದರೆ, ಮಗುವು ಮೊಲೆತೊಟ್ಟುಗಳನ್ನು ಕಚ್ಚುವ ಸಾಧ್ಯತೆಗಳಿವೆ. ಮಗುವಿನ ಕಡಿತಕ್ಕೆ ಹೆದರಿ ಮಗುವನ್ನು ದೂರವಿರಿಸುವುದಕ್ಕಿಂತ, ಮಗುವನ್ನು ನಿಮ್ಮ ಎದೆಗಪ್ಪಿಕೊಂಡು, ತೊಟ್ಟನ್ನು ಅದರ ಬಾಯಿಗೆ ಸರಿಯಾಗಿ ಪ್ರವೇಶಿಸುವಂತೆ ಎತ್ತಿ ಕೊಳ್ಳುವುದರಿಂದ ಮಗುವಿನ ಹಲ್ಲು ನಿಮ್ಮ ಮೊಲೆ ತೊಟ್ಟಿಗೆ ತಾಗಲಾರದು. 

(೩) ವೇಳಾಪಟ್ಟಿಯನ್ನಿಟ್ಟುಕೊಳ್ಳಿ

ಮಕ್ಕಳನ್ನು ಸರಿಯಾಗಿ ನಿಗಾ ವಹಿಸಿ. ಮಗುವಿಗೆ ಹಸಿವಾಗುವ ಸಮಯ, ಮತ್ತೊಬ್ಬರೊಂದಿಗೆ ಆಟವಾಡಲು ಬಯಸುವ ಸಮಯ,ಮಲಗುವ ಸಮಯ ಎಲ್ಲವನ್ನೂ ಗುರುತಿಸಿಕೊಳ್ಳಿ ( ಹೌದು, ಮಗುವಿಗೆ ತಮ್ಮದೇ ಆದ ವೇಳಾಪಟ್ಟಿಗಳಿವೆ) ಹೊಟ್ಟೆ ತುಂಬಿದ ಮಗುವು ಎದೆ ಹಾಲುಣಿಸುವಾಗ ಕಚ್ಚುವ ಸಾಧ್ಯತೆಗಳಿವೆ. ಆದುದರಿಂದ ನಿಮ್ಮ ಸಮಯವನ್ನು ಮಗುವಿನ ಸಮಯದೊಂದಿಗೆ ಹೋಲಿಸಿಕೊಳ್ಳಿ. ಒತ್ತಾಯ ಪೂರ್ವಕವಾಗಿ ಮೊಲೆಯೂಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. .

(೪) ಮಗುವು ನಿದ್ರೆ ಹೋದರೆ ಎದೆ ಹಾಲುಣಿಸುವುದನ್ನು ನಿಲ್ಲಿಸಿರಿ

ಮಕ್ಕಳು ಅಡವು ಹಚ್ಚಿ ಮಲಗಿ ನಿದ್ರೆ ಹೋಗುವುದರಿಂದ, ಅವರು ಮಲಗಿದ ಮೇಲೆ ಮೊಲೆ ತೊಟ್ಟನ್ನು ಅವರ ಬಾಯಿಯಿಂದ ಬಿಡಿಸುವುದು ತ್ರಾಸದಾಯಕವೆನಿಸಬಹುದು. ಜಾಗ್ರತೆಯಾಗಿರಿ.. ಹಾಗೂ ಮೊಲೆಯೂಡಿಸುವ ಸಂದರ್ಭಗಳಲ್ಲಿ ಮಗುವು ನಿದ್ರಿಸದಂತೆ ನಿಗಾ ವಹಿಸಿ. ಮಗುವು ನಿದ್ರಿಸಿದ್ದೇ ಆದರೆ ಬೆರಳುಗಳನ್ನು ಉಪಯೋಗಿಸಿ ಮಗುವಿನ ಬಾಯಿಂದ ಮೊಲೆತೊಟ್ಟನ್ನು ಯಾವುದೇ ಹಿಂಜರಿಕೆ ಇಲ್ಲದೆ ಬಿಡಿಸಿಕೊಳ್ಳಿ. 

(೫)ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಿ ಹಾಗೂ ಮಗುವಿನೊಂದಿಗೆ ಸಂವಹಿಸಿ

ಗಮನ ಕಳೆದುಕೊಂಡ ಮಗುವು ಮೊಲೆಯೂಡಿಸುವ ಸಮಯಗಳಲ್ಲಿ ಅಲುಗಾಡಬಹುದು. ಇದು ನಿಮ್ಮನ್ನು ಕಚ್ಚುವಂತೆ ಪ್ರತಿಕ್ರಿಯಿಸುತ್ತದೆ. ಆದ ಕಾರಣ ಎದೆಹಾಲುಣಿಸಲು ಪ್ರಶಾಂತವಾದ ವಾತಾವರಣವನ್ನೇ ಆಯ್ಕೆ ಮಾಡಿಕೊಳ್ಳಿ. ಮಗುವಿನೊಂದಿಗೆ ಮಾತನಾಡಿ. “ ನನ್ನ ತಾಯಿಯು ನನ್ನ ಜೊತೆಯಲ್ಲಿ ಇದ್ದಾಳೆ” ಎಂದು ಮಗುವಿಗೆ ತಿಳಿಯಪಡಿಸಿ. ಹಾಲುಣಿಸುವ ಸಮಯದಲ್ಲಿ ಕಚ್ಚಬಾರದೆಂದು ಮಗುವಿಗೆ ತಿಳಿಹೇಳಿ. ನೀವಂದುಕೊಂಡಿರುವುದಕ್ಕಿಂತಲೂ ಚುರುಕಾದ ನಿಮ್ಮ ಮಗು ನಿಮ್ಮನ್ನು ಬಹಳ ಬೇಗನೆ ಅರ್ಥ ಮಾಡಿಕೊಳ್ಳಬಲ್ಲದು. 

(೬) ಹಾಲಿನ ಪ್ರವಾಹ ಕಡಿಮೆಯಾಗದಂತೆ ನೋಡಿಕೊಳ್ಳಿ

ಎದೆ ಹಾಲುಣಿಸುವ ಸಮಯದಲ್ಲಿ ಸರಿಯಾಗಿ ಹಾಲು ಸಿಗದಿದ್ದರೆ ಕುಪಿತಗೊಂಡ ಮಗುವು ಕೆಲವೊಮ್ಮೆ ಕಚ್ಚುವ ಸಾಧ್ಯತೆಗಳಿವೆ. ಆದ ಕಾರಣ ನಿಮ್ಮ ಎದೆಹಾಲು ಸರಿಯಾಗಿ ಪ್ರವಹಿಸುತ್ತದೆಯೇ ಎಂದೂ, ಹಾಲನ್ನು ಸ್ರವಿಸುವ ಪೇಶಿಗಳು ಮುಚ್ಚಿಕೊಂಡಿಲ್ಲವೆಂದು ಖಾತರಿಪಡಿಸಬೇಕು. 

(೭) ಕಡಿದರೆ ಮಗುವನ್ನು ಕೆಳಗೆ ಮಲಗಿಸಿ

ಕಡಿದರೆ ಹಾಲು ಸಿಗಲಾರದೆಂದು ತಿಳಿಸಲಿರುವ ಉತ್ತಮ ಮಾರ್ಗವಿದು. ಮೊಲೆಯುಣಿಸುವಾಗ ಮಗುವು ಕಡಿದರೆ, ಮಗುವನ್ನು ಕೆಳಗೆ ಮಲಗಿಸಿ. ಸ್ವಲ್ಪ ಸಮಯಗಳ ಬಳಿಕ ಮೊಲೆಯೂಡಿಸಿ. ಸಾಧಾರಣವಾಗಿ, ಒಂಬತ್ತು ತಿಂಗಳು ಪ್ರಾಯವಾದ ಮಕ್ಕಳು ತಾಯಿಯರ ಶರೀರ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

Leave a Reply

%d bloggers like this: