ಮಗುವು ಜನಿಸಿದ ನಂತರ ತನ್ನ ಪ್ರಾರಂಭಿಕ ದಿನಗಳಲ್ಲಿ ಹೆಚ್ಚು ನಿದ್ರೆಯಲ್ಲಿ ಜಾರಿರುತ್ತದೆ. ಆ ಸಮಯದಲ್ಲಿ ಮಗುವು ನನಗೆ ಹಸಿವು ಎಂದು ಅಳುವುದಿಲ್ಲ, ಅಥವಾ ಬೇರೆ ಯಾವ ತರದ ಸನ್ನೆಯನ್ನು ಮಾಡುವುದಿಲ್ಲ, ಇದು ತಾಯಿಯಂದಿರಿಗೆ ಮಗುವಿಗೆ ಹಸಿವಾಗಿದೆಯೇ ಇಲ್ಲವೇ ಎಂಬ ತಲೆ ನೋವನ್ನು ತರಬಹುದು, ಅದರಲ್ಲೂ ಮೊದಲ ಬಾರಿಗೆ ತಾಯಿ ಆದವರಿಗೆ ಇದು ಗೊಂದಲದ ಗೂಡಾಗಿಯೇ ಕಾಡುತ್ತಿರುತ್ತದೆ. ಚಿಂತಿಸಬೇಡಿ, ನಿಮ್ಮ ನವಜಾತ ಶಿಶುವಿಗೆ ದಿನಕ್ಕೆ ಎಷ್ಟು ಬಾರಿ ಎಷ್ಟು ಹಾಲುಣಿಸಬೇಕು ಎಂಬ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಮಗುವು ಜನಿಸಿದ ನಂತರ ಮುಂದಿನ ಕೆಲವು ದಿನಗಳವರೆಗೆ, ಅಂದರೆ, ಪ್ರಾರಂಭಿಕ ಕೆಲವು ದಿನಗಳವರೆಗೆ, ಮಗುವಿಗೆ ಪ್ರತಿ ಒಂದೂವರೆ ಗಂಟೆ ಅಥವಾ ಮೂರು ಗಂಟೆಗಳಿಗೊಮ್ಮೆ ಹಾಲುಣಿಸಬೇಕು. ಮಗುವಿನ ಉದರ ಬೆಳೆಯಲು ಪ್ರಾರಂಭಿಸಿದಾಗ ಮತ್ತು ಮಗುವು ತೂಕವನ್ನು ಪಡೆಯಲು ಶುರುಮಾಡಿದ ನಂತರ, ಹಾಲುಣಿಸವ ಅಂತರವನ್ನು ೩-೪ಗಂಟೆಗಳಿಗೆ ಮುಂದೂಡಬಹುದು.
ಇದನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾನೇ ಮುಖ್ಯ, ನವಜಾತ ಶಿಶುಗಳು ತಮ್ಮ ಮೊದಲ ವಾರದಲ್ಲಿ ಹಸಿವಾದಾಗಲೆಲ್ಲಾ ಹಸಿವಾಗುತ್ತಿದೆ ಎಂಬ ಸನ್ನೆಯನ್ನು ಮಗುವು ಮಾಡುವುದಿಲ್ಲ, ಆದ್ದರಿಂದ ಮಗುವಿನ ಪೋಷಣೆಗಾಗಿ ಹಾಲುಣಿಸುವ ಸಮಯದಲ್ಲಿ ನೀವೇ ಮಗುವನ್ನು ಎಬ್ಬಿಸಿ ಹಾಲುಣಿಸುವುದು ಉತ್ತಮ. ಕೆಲವು ನವಜಾತ ಶಿಶುಗಳು ರಾತ್ರಿ ಚಟುವಟಿಕೆಯವರಾಗಿದ್ದು, ಬೆಳಿಗ್ಗೆ ನಿದ್ರೆ ಮಾಡಿ, ರಾತ್ರಿ ಸಮಯ ಎಚ್ಚರವಾಗಿರುವರು. ಇಂತಹ ಸಂದರ್ಭದಲ್ಲಿ ನಿಮ್ಮ ಮಗುವಿಗೆ ಹಾಲುಣಿಸುವ ಸಮಯವನ್ನು ನಿರ್ಧರಿಸುವುದು ಕಷ್ಟ ಮಗುವು ರಾತ್ರಿ ಎಚ್ಚರವಾಗಿರುವುದರಿಂದ ರಾತ್ರಿ ಸಮಯ ಹಾಲನ್ನು ಕೇಳಬಹುದು, ನೀವು ಈ ಸಮಯದಲ್ಲಿ ಶಿಶುವಿಗೆ ಪೋಷಣೆಯ ಕೊರತೆಯಾಗದಂತೆ ನೋಡಿಕೊಳ್ಳುವುದು ಸ್ವಲ್ಪ ಕಷ್ಟದ ಸಂಗತಿ, ಆದರೆ ಒಬ್ಬ ತಾಯಿಯಾಗಿ ಇದು ನಿಮ್ಮಿಂದ ಮಾತ್ರ ಸಾಧ್ಯ. ಸಾಮಾನ್ಯವಾಗಿ ಮೊದಲ ವಾರದಲ್ಲಿ ಮಗುವಿಗೆ ದಿನದಲ್ಲಿ ಕನಿಷ್ಠ ೧೦-೧೪ ಬಾರಿ ಎದೆಹಾಲುಣಿಸಬೇಕು.
ಒಂದು ದಿನದ ಮಗು: ಹುಟ್ಟಿದ ಮೊದಲ ೨೪ ಗಂಟೆಯಲ್ಲಿ ತಾಯಿಯು ಮಗುವಿಗೆ ೮ ರಿಂದ ೧೨ ಬಾರಿ ಎದೆಹಾಲುಣಿಸಬೇಕು. ಹೆಚ್ಚಿನ ಶಿಶುಗಳು ಆಗಾಗ್ಗೆ ಇದಕ್ಕಿಂತ ಹೆಚ್ಚಿನ ಬಾರಿ ಹಾಲನ್ನು ಕುಡಿಯುತ್ತಾರೆ, ಆಗಿದ್ದರು ಕೆಲವು ಶಿಶುಗಳು ತೃಪ್ತಿಕರವಾದಂತೆ ಕಾಣುವುದಿಲ್ಲ. ಇದು ಏಕೆಂದರೆ, ಅವರ ಹೊಟ್ಟೆ ತುಂಬಾ ಸಣ್ಣದಾಗಿರುವುದು, ಮಗುವಿನ ಹೊಟ್ಟೆ ತುಂಬಾ ಸಣ್ಣದಾಗಿರುವುದರಿಂದ ಬೇಗನೆ ತುಂಬಿ ಬೇಗನೆ ಖಾಲಿಯಾಗಿ ಹಸಿವಾಗುತ್ತದೆ. ಆಗಾಗ್ಗೆ ಎದೆಹಾಲುಣಿಸುವುದರಿಂದ ನಿಮ್ಮ ಸ್ತನದಲ್ಲಿ ಹಾಲು ಹೆಚ್ಚಾಗುತ್ತದೆ, ಆದ್ದರಿಂದ ಗಡಿಯಾರದ ಸಮಯಕ್ಕೆ ಹಾಲುಣಿಸುವ ಬದಲು ಮಗುವಿನ ಅವಶ್ಯಕತೆಗೆ ತಕ್ಕಂತೆ ಎದೆಹಾಲುಣಿಸಿ.
ಮೂರು ದಿನದ ಮಗು: ನೀವು ದಿನಕ್ಕೆ ಕನಿಷ್ಠ ೮ ರಿಂದ ೧೨ ಬಾರಿ ಎದೆಹಾಲುಣಿಸಬೇಕು. ಮಗುವಿನ ಬೇಡಿಕೆಯ ಮೇಲೆ ಎದೆಹಾಲನ್ನು ಉಣಿಸಿ ಮತ್ತು ದಿನಕ್ಕೆ ಎಷ್ಟು ಡೈಪರ್ ಅನ್ನು ಒದ್ದೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿ. ೨೪ ಗಂಟೆಗಳಲ್ಲಿ ಒಂದು ಒದ್ದೆ ಡೈಪರ್ ಅನ್ನು ನೀವು ನೋಡಲಿಲ್ಲ ಎಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಏಳು ದಿನದ ಮಗು: ಪ್ರತಿದಿನ ಕನಿಷ್ಠ ೮ ರಿಂದ ೧೪ ಬಾರಿ ಎದೆಹಾಲನ್ನು ಉಣಿಸಿ. ನಿಮ್ಮ ಸ್ತನದಲ್ಲಿ ಹಾಲು ಈಗ ಮೊದಲಿಗಿಂತ ಹೆಚ್ಚಾಗಿದ್ದು, ಪ್ರತಿ ಬಾರಿ ಎದೆಹಾಲುಣಿಸುವಾಗಲು ಮಗುವು ಮೊದಲಿಗಿಂತ ಹೆಚ್ಚು ಹಾಲನ್ನು ಈಗ ಕುಡಿಯುತ್ತದೆ.
ಮೂವತ್ತು ದಿನದ ಮಗು: ಈಗಲೂ ದಿನಕ್ಕೆ ೮ ರಿಂದ ೧೦ ಬಾರಿ ಎದೆಹಾಲುಣಿಸಿ, ಈಗ ಮೊದಲಿಗಿಂತ ಹೆಚ್ಚು ಹಾಲನ್ನು ಮಗುವು ಪ್ರತಿ ಹಾಲುಣಿಸುವಿಕೆಯ ಸಮಯದಲ್ಲಿ ಕುಡಿಯುತ್ತದೆ. ಮಗುವು ಇಲ್ಲಿನಿಂದ ಸ್ವಲ್ಪ ನಿಧಾನವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ನಿಮ್ಮ ಮಗುವಿನ ಮಲ ಕೂಡ ನಿಧಾನವಾಗಿ ಆಗಬಹುದು, ಮಲವನ್ನು ಮಾಡದೇ ಕೆಲವು ದಿನಗಳವರೆಗೆ ಇರಬಹುದು(ಅದು ಒಂದು ವಾರ ಕೂಡ ಇರಬಹುದು), ಒಂದು ತಿಂಗಳ ನಿರಂತರ ಎದೆಹಾಲುಣಿಸುವಿಕೆ ಇಂದ ನೀವು ನಿಮ್ಮ ಮಗುವಿಗೆ ಮಹತ್ವದ ಸುರಕ್ಷತೆಯನ್ನು ನೀಡಿರುವಿರಿ.