ವಿಡಿಯೋ – ವೀರ್ಯ ಮತ್ತು ಮೊಟ್ಟೆಯ ಮಿಲನ : ಗರ್ಭಧಾರಣೆಯ ಮೊದಲ ಹಂತ

ನಿಮ್ಮ ಹೆರಿಗೆಯ ದಿನವನ್ನು ನಿಮ್ಮ ಕೊನೆಯ ಪಿರಿಯಡ್ಸ್  ನ ಮೊದಲ ದಿನದಿಂದ ಲೆಕ್ಕ ಹಾಕಲಾಗುತ್ತದೆ. ಫಲೀಕರಣವು ಆ ದಿನದಿಂದ ಸುಮಾರು 14 ದಿನಗಳ ನಂತರ ಆಗುತ್ತದೆ. ಈ ಫಲೀಕರಣ ಪ್ರಕ್ರಿಯೆ ಆದ ನಂತರ ನೀವು ಗರ್ಭಿಣಿ ಆಗಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಹೇಗೆ ಆಗುತ್ತದೆ ಎಂಬುದನ್ನು ನೀವು ಈ ವಿಡಿಯೋ ನೋಡಿ ತಿಳಿಯಬಹುದು. ಅದರ ಸಂಪೂರ್ಣ ವಿವರಣೆ ಕನ್ನಡದಲ್ಲಿ ಇಲ್ಲಿದೆ.

ಮೊದಲಿಗೆ ನಿಮ್ಮ ಎರಡು ಅಂಡಾಶಯಗಳಲ್ಲಿ ಒಂದು ಅಂಡಾಶಯವು ಕೋಶಕದೊಳಗೆ (ಕೋಶಕ ಎಂದರೆ ಫಾಲಿಕಲ್) ಒಂದು ಅಂಡಾಣುವನ್ನು ಪ್ರೌಢಾವಸ್ಥೆಗೆ ತರುತ್ತದೆ. ನಂತರ ನಿಮ್ಮ ಮೆದುಳಿನ ಆದೇಶದ ಮೇಲೆ ಅಂಡಾಶಯವು ಆ ಪ್ರೌಢಾವಸ್ಥೆಗೆ ಬಂಡ ಅಂಡಾಣು – ಅಂದರೆ ಮೊಟ್ಟೆಯನ್ನು ಬಿಡುಗಡೆ ಮಾಡುತ್ತದೆ. ಅಕಸ್ಮಾತ್ ನಿಮ್ಮ ಎರಡೂ ಅಂಡಾಶಯಗಳೂ ಮೊಟ್ಟೆಗಳನ್ನು ಬಿಡುಗಡೆ ಮಾಡಿದರೆ, ನಿಮಗೆ ಅವಳಿ ಜವಳಿ ಮಕ್ಕಳು ಆಗುತ್ತಾರೆ.

ನಂತರ ಈ ಮೊಟ್ಟೆಯು ನಿಮ್ಮ ಡಿಂಬನಾಳ (ಫಾಲೋಪಿಯನ್ ಟ್ಯೂಬ್)ದ  ಒಳಗೆ ಸಂಚರಿಸುತ್ತದೆ. ಈ ಟ್ಯೂಬಿನಲ್ಲಿ ಮೊಟ್ಟೆಯು ವೀರ್ಯದ ಆಗಮನಕ್ಕೆ ಕಾಯುತ್ತದೆ. ಒಂದು ಚಮಚದಷ್ಟು ವೀರ್ಯದಲ್ಲಿ ಸುಮಾರು 300 ದಶಲಕ್ಷ ವೀರ್ಯಾಣುಗಳು ಇರುತ್ತವೆ. ಇವುಗಳಲ್ಲಿ ಕೇವಲ ಸುಮಾರು 10 ಲಕ್ಷದಷ್ಟು ವೀರ್ಯಾಣುಗಳು ಮಾತ್ರ ಗರ್ಭಕಂಠ (ಸರ್ವಿಕ್ಸ್) ಅನ್ನು ಪ್ರವೇಶಿಸುತ್ತವೆ. ಮೊಟ್ಟೆಯೊಂದಿಗೆ ಫಲೀಕರಣ ಹೊಂದಲು, ವೀರ್ಯಾಣುಗಳು ಗರ್ಭಕಂಠದೊಳಗೆ ಸುಮಾರು 6 ಇಂಚಿನಷ್ಟು ದಾರಿಯನ್ನು ಸಂಚರಿಸಬೇಕು. ಆದರೆ ಬಹುತೇಕ ವೀರ್ಯಾಣುಗಳು ಗುರಿ ತಲುಪುವುದೇ ಇಲ್ಲ. ಕೊನೆಯಲ್ಲಿ ಮೊಟ್ಟೆಯ ಬಳಿ ಧಾವಿಸುವುದು ಸುಮಾರು 200 ವೀರ್ಯಾಣುಗಳು ಅಷ್ಟೇ.

ಈ ವಿರ್ಯಾಣುಗಳಲ್ಲಿ ಯಾವುದಾದರೂ ಒಂದು ವೀರ್ಯಾಣು ಮೊಟ್ಟೆಯನ್ನು ಪ್ರವೇಶಿಸಿದಾಗ ಫಲೀಕರಣ ಆಗುತ್ತದೆ. ವೀರ್ಯಾಣು ಮತ್ತು ಮೊಟ್ಟೆ ತಲಾ 23 ಕ್ರೋಮೋಸೋಮ್ ಹೊಂದಿದ್ದು, ಇವುಗಳೇ ಮಗುವಿನ ಲಿಂಗ ನಿರ್ಧರಿಸುವುದು ಮತ್ತು ನಿಮ್ಮ ಮಗುವಿನ ತಳಿಶಾಸ್ತ್ರ ರೂಪುಗೊಳಿಸುವುದು. ಅಂದರೆ ಈ ಕ್ರೋಮೋಸೋಮ್ಸ್ ನಿಮ್ಮ ಮಗುವಿನ ದೈಹಿಕ ಅಂಶಗಳು, ಅದರ ಸೌಂದರ್ಯ, ಬುದ್ದಿವಂತಿಕೆ ಮತ್ತು ವ್ಯಕ್ತಿತ್ವವನ್ನ ರೂಪಿಸುತ್ತವೆ.

ಫಲೀಕರಣ ಹೊಂದಿದ 24 ಘಂಟೆಗಳ ಒಳಗೆ, ಅಂದರೆ ಮೊಟ್ಟೆಯು ಯುಗ್ಮಜ (ಜೆಯ್ಗೋಟ್) ಆಗಿ ಪರಿವರ್ತನೆ ಆಗಿ 24 ಘಂಟೆಗಳ ನಂತರ ಅದು ಒಂದು ಕೋಶ ಇದಿದ್ದು, ಈಗ ವಿದಳನ ಹೊಂದಿ ಎರಡು ಕೋಶಗಳು ಆಗುತ್ತವೆ. ಈ ಯುಗ್ಮಜವು ಗರ್ಭಕೋಶ ಸೇರುವಷ್ಟರಲ್ಲಿ, 12 ಘಂಟೆಗಳಿಗೆ ಒಮ್ಮೆ ಕೋಶಗಳು ದ್ವಿಗುಣವಾಗುತ್ತಾ ಹೋಗುತ್ತವೆ.

ಫಲೀಕರಣ ಆದ ಮೂರು ದಿನಗಳ ನಂತರ, ಯುಗ್ಮಜವು 32 ಕೋಶಗಳ ಒಂದು ಚೆಂಡಿನಂತೆ ಆಗುತ್ತದೆ. ಇದು ಕಾಣಲಿಕ್ಕೆ ಸೀತಾಫಲ ಹಣ್ಣಿನಂತೆ ಇರುತ್ತದೆ. ಕೆಲವು ದಿನಗಳ ನಂತರ ಈ ಯುಗ್ಮಜವು 500 ಕೋಶಗಳ ಒಂದು ದ್ರವ್ಯ ತುಂಬಿದ ಚೆಂಡಾಗುತ್ತದೆ ಮತ್ತು ಅದು ಗರ್ಭಕೋಶ ಸೇರುತ್ತದೆ. ಏಳನೇ ದಿನದಂದು ಈ ಯುಗ್ಮಜವು ಗರ್ಭಕೋಶದ ಒಳಗೋಡೆಗೆ ಕಸಿ ಆಗುತ್ತದೆ. ಬಹಳಷ್ಟು ಹೆಂಗಸರಿಗೆ ಈ ಸಮಯದಲ್ಲಿ ರಕ್ತಸ್ರಾವವು ಕಾಣಿಸಿಕೊಂಡಿದೆ. ಈ ಯುಗ್ಮಜದ ಹೊರಗಿನ ಕೋಶಗಳು ಕರುಳು ಬಳ್ಳಿಯಾಗಿ ರೂಪುಗೊಳ್ಳುತ್ತವೆ.

ಇನ್ನೂ 38 ವಾರಗಳಲ್ಲೇ ಈ 500 ಕೋಶಗಳ ಒಂದು ಚೆಂಡು, 2 ಲಕ್ಷ ಕೋಟಿಯಷ್ಟು ಕೋಶಗಳಿರುವ ಒಂದು ಶಿಶುವಾಗಿ ಪರಿವರ್ತನೆ ಆಗುತ್ತದೆ.

Leave a Reply

%d bloggers like this: