ನಿಮ್ಮ ಮಗುವು ಹೆಚ್ಚು ಅಳಲು ಕಾರಣಗಳು

ಮಗುವು ಅಳಲು ಶುರು ಮಾಡಿದ ತಕ್ಷಣ ತಂದೆ ಅಥವಾ ತಾಯಿ ಮಗುವಿನ ಬಳಿ ಬಂದು ಅಳುವುದಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳಲು ಪ್ರಯತ್ನಿಸುವುದು ಸಹಜ. ಸಾಮನ್ಯವಾಗಿ ಮಗು ಅಳುವುದು ತನಗೆ ಹಸಿವಾಗಿದ್ದಾಗ, ಅನೇಕ ಪೋಷಕರು ಇದನ್ನೇ ತಿಳಿದುಕೊಳ್ಳುವುದು. ನಿಮ್ಮ ಮಗುವು ನಿಮ್ಮ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿದೆ. ಮಗುವಿನ ಅಳುವನ್ನು ನೀವು ತ್ವರಿತವಾಗಿ ಸಮಾಧಾನ ಪಡಿಸುವುದು ಒಳ್ಳೆಯದು.

ಮಗುವು ಅಳಲು ಕೆಲವು ಕಾರಣಗಳು
೧.ಹಸಿವು

ಮಗುವು ಸಾಮಾನ್ಯವಾಗಿ ಅಳುವುದು ತನಗೆ ಹಸಿವಾದಾಗ, ಇದು ಮಗುವಿನ ಮೂಲ ಅವಶ್ಯವಿರುವ ಒಂದು ವಿಷಯವಾಗಿದೆ. ನೀವು ಮಗುವಿಗೆ ಅಗತ್ಯವಿರುವ ಹಾಲನ್ನು ನೀಡುವುದು ಒಳ್ಳೆಯದು, ನವಜಾತ ಶಿಶುಗಳ ಹೊಟ್ಟೆ ಸಣ್ಣ ಇರುವುದರಿಂದ ಸ್ವಲ್ಪ ಹಾಲು ಕುಡಿದು, ಪುನಃ ಹಸಿವಿನಿಂದ ಅಳಲು ಪ್ರಾರಂಭಿಸಬಹುದು. ಇಂತಹ ಸಮಯದಲ್ಲಿ ಮಗುವನ್ನು ಸೂಕ್ಷ್ಮವಾಗಿ ಗಮನಿಸಿ, ಮಗುವು ಬೆರಳನ್ನು ಚೀಪುವಂತಹ ಅಥವಾ ಬಾಯಿಯನ್ನು ಆಡಿಸುವ ಚಿಹ್ನೆಯನ್ನು ಮಾಡುತ್ತಿದ್ದರೆ ಹಸಿವಾಗಿದೆ ಎಂದು ಅರ್ಥ.

೨.ಡೈಪರ್ ಒದ್ದೆ ಆಗಿದೆ

ಹಲವು ಮಕ್ಕಳು ತಮ್ಮ ಡೈಪರ್ ಒದ್ದೆ ಆದ ತಕ್ಷಣ ಅಳಲು ಪ್ರಾರಂಭಿಸುವರು. ಇದರಿಂದ ಅವರಿಗೆ ಅಸಮಾಧಾನ ಆಗಬಹುದು. ಒದ್ದೆಯಾದ ಡೈಪರ್ ಶಿಶುಗಳ ಸೂಕ್ಷ್ಮ ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡಬಹುದು, ಈ ಕಿರಿಕಿರಿ ಮಗುವನ್ನು ಅಳುವಂತೆ ಮಾಡಬಹುದು, ಅದು ಮಗುವು ಮಲಗಿರುವ ಸಮಯದಲ್ಲೂ ಕೂಡ. ಒದ್ದೆಯಾದ ಡೈಪರ್ ಅನ್ನು ಬದಲಿಸಿದ ತಕ್ಷಣ ಮಗುವು ಸಮಾಧಾನಗೊಂಡು ಮತ್ತೆ ಮಲಗುತ್ತದೆ.

೩.ಡೈಪರ್ ರಾಷ್

ಡೈಪರ್ ನಿಂದ ಆದ ರಾಷಸ್ ಗಳು ಮಗುವನ್ನು ಅಳುವಂತೆ ಮಾಡುವವು. ಈ ದದ್ದುಗಳು ಮಗುವಿನ ತೊಡೆಯ ಭಾಗ, ಅಂಡು ಮತ್ತು ಜನನಾಂಗದ ಹತ್ತಿರ ಕಾಣಬಹುದು. ಇವುಗಳು ಮಗುವಿಗೆ ಕಿರಿಕಿರಿಯ ಜೊತೆಗೆ ನೋವನ್ನು ಕೊಡುತ್ತವೆ. ಈ ದದ್ದುಗಳನ್ನು ನೀವು ಅಲಕ್ಷಿಸಿದರೆ ಗುಳ್ಳೆಗಳಾಗಿ ಮಗುವಿಗೆ ತೊಂದರೆಯನ್ನು ಉಂಟು ಮಾಡಬಹುದು. ನಿಮ್ಮ ಮಗುವಿನ ಕೆಳಭಾಗದಲ್ಲಿ ಕೆಂಪು ಕಲೆಗಳನ್ನು ಕಂಡರೆ ಅದು ಡೈಪರ್ ನಿಂದ ಆದ ದದ್ದುಗಳು ಎಂದು ಹೇಳಬಹುದು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾಡಿ.

೪.ಹಲ್ಲು ಹುಟ್ಟುವುದು

ನಿಮ್ಮ ಮಗುವು ೭-೯ತಿಂಗಳ ಶಿಶುವಾಗಿದ್ದು, ದಿಡೀರ್ ಆಗಿ ಹೆಚ್ಚು ಅಳಲು ಪ್ರಾರಂಭಿಸಿದರೆ, ಹಲ್ಲು ಬೆಳೆಯುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಬಹುದು. ಹಲ್ಲು ಹುಟ್ಟುವುದು ಶಿಶುಗಳಲ್ಲಿ ನೋವು ಮತ್ತು ಅಸಹಜತೆಯನ್ನು ಉಂಟುಮಾಡುತ್ತದೆ. ನಿಮ್ಮ ಮಗುವು ಕಚ್ಚುವುದನ್ನು ಮಾಡುತಿದ್ದರೆ ಅದು ನಿಖರವಾಗಿ ಹಲ್ಲು ಬೆಳೆಯುವುದರ ಸೂಚನೆಯಾಗಿದೆ.

೫.ಹೊಟ್ಟೆಯ ಸಮಸ್ಯೆ

ನಿಮ್ಮ ಮಗುವನ್ನು ನೀವು ಹಾಸಿಗೆಯ ಮೇಲೆ ಮಲಗಿಸಿದ ಕೆಲವೇ ಕ್ಷಣಗಳಲ್ಲಿ ಅಳಲು ಪ್ರಾರಂಭಿಸಿದರೆ ಅದಕ್ಕೆ ಹೊಟ್ಟೆಯ ಸಮಸ್ಯೆ ಕಾರಣ. ನಿಮ್ಮ ಮಗುವಿಗೆ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಸಿ, ಇದರಿಂದ ಮಗುವಿನ ಗಮನವನ್ನು ಬೇರೆಡೆಗೆ ಸೆಳೆದಂತೆ ಆಗಿ ಮಗುವು ಆರಾಮದಾಯಕವಾಗಿ ನಿದ್ರೆ ಮಾಡಲು ಸಹಾಯ ಆಗುತ್ತದೆ. ಅಥವಾ ಬೆಚ್ಚನೆಯ ಬಟ್ಟೆಯನ್ನು ಮಗುವಿನ ಹೊಟ್ಟೆಯ ಮೇಲೆ ಇರಿಸುವುದು ಕೂಡ ಮಗುವಿನ ಹೊಟ್ಟೆಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ.

Leave a Reply

%d bloggers like this: