ಜನರು ನಿಮ್ಮನ್ನು ನೋಡಿ ಅಸೂಯೆ ಪಟ್ಟುಕೊಳ್ಳುವ ವಿಷಯ ಯಾವುದೆಂದು ನಿಮ್ಮ ರಾಶಿ ಹೇಳುತ್ತದೆ..!

ನಂಬದೆ ಇರುವವರಿಗೆ ರಾಶಿಯು ಕೇವಲ ನೀವು ಯಾವ ಸಮಯದಲ್ಲಿ ಜನಿಸಿದ್ದು ಎಂಬುದನ್ನ ಮಾತ್ರ ತಿಳಿಸುವಂತದ್ದು. ಆದರೆ ನಂಬುವವರಿಗೆ ಈ ರಾಶಿಯು ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳು, ತಮ್ಮ ಇಷ್ಟ ಮತ್ತು ಅನಿಷ್ಟಗಳು ಮತ್ತು ಇನ್ನೂ ಹಲವಾರು ವಿಷಯಗಳನ್ನ ತೆರೆದಿಡುತ್ತದೆ. ಇಷ್ಟೇ ಏಕೆ, ನಿಮ್ಮ ರಾಶಿಯು ಜನರು ನಿಮ್ಮನ್ನು ನೋಡಿ ಅಸೂಯೆ ಪಟ್ಟುಕೊಳ್ಳುವಂತ ನಿಮ್ಮಲ್ಲಿರುವ ಆ ಗುಣ ಯಾವುದೆಂದು ಕೂಡ ತಿಳಿಸುತ್ತದೆ. ನಿಮ್ಮ ರಾಶಿಯ ಬಗ್ಗೆ ಇಲ್ಲಿ ನಾವು ವಿಶ್ಲೇಷಿಸಿರುವುದು ಸರಿ ಇದೆಯೇ ಎಂಬುದನ್ನು ಓದಿ ನೋಡಿ.

ಮೇಷ

ಜನರು ನಿಮ್ಮ ಎಂದಿಗೂ ಕಡಿಮೆಯೇ ಆಗದ ಉತ್ಸಾಹ, ಎನರ್ಜಿ ನೋಡಿ ಅಸೂಯೆ ಪಟ್ಟುಕೊಳ್ಳುವರು. ನೀವು ಯಾವಾಗಲು ಎಲ್ಲದಕ್ಕೂ ಮುಂಚಿತವಾಗಿಯೇ ಸಿದ್ದರಾಗಿ, ಕಾರ್ಯಸನ್ನದ್ಧರಾಗಲು ತುದಿಗಾಲಲ್ಲಿ ನಿಂತಿರುತ್ತೀರಾ. ಎಲ್ಲರೂ ಬೆಳಗ್ಗೆ ಹೊತ್ತು ನಿದ್ದೆಗಣ್ಣಿನಲ್ಲಿ ಇನ್ನೊಂದು 5 ನಿಮಿಷ ಮಲಗಬೇಕಿತ್ತು ಎಂದು ಮೆಲ್ಲನೆ ಮಂಚದಿಂದ ಇಳಿದರೆ, ನೀವು ಒಮ್ಮೆಲೇ ಎದ್ದು, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಬೇಕಿರುವುದಕ್ಕಿಂತ ಮುಂಚೆಯೇ ಮುಗಿಸಿರುತ್ತೀರಾ.

ವೃಷಭ

ನಿಮಗೆ ಎಲ್ಲದರಲ್ಲೂ ಒಳ್ಳೆಯ ರುಚಿ ಇರುತ್ತದೆ. ನಿಮ್ಮ ಇಂದ್ರಿಯಗಳು ಬಹಳ ಸೂಕ್ಷ್ಮವಾಗಿದ್ದು, ನಿಮಗೆ ಅಡುಗೆ ಮಾಡುವುದು, ಸಂಗೀತ, ರೋಮ್ಯಾನ್ಸ್ ಎಂದರೆ ಇಷ್ಟ. ನೀವು ಬಹಳ ಸೂಕ್ಷ್ಮವಾಗಿ ಆರಿಸಿ, ಧರಿಸುವ ಉಡುಪು, ನಿಮ್ಮ ಕೇಶಶೈಲಿ, ನೀವು ಮನೆಯನ್ನ ಅಚ್ಚುಕಟ್ಟಾಗಿ ಸಿಂಗರಿಸುವ ರೀತಿ ಎಲ್ಲವೂ ನಿಮ್ಮ ಒಳ್ಳೆಯ ರುಚಿಯಿಂದ ನೋಡುಗರ ಕಣ್ಣು ಕುಕ್ಕುತ್ತದೆ. ಇದುವೇ ಅವರಲ್ಲಿ ನಿಮ್ಮ ಬಗ್ಗೆ ಅಸೂಯೆ ಮೂಡಿಸುವುದು.

ಮಿಥುನ

ಜನರು ಮಿಥುನ ರಾಶಿಯ ಜನರು ಮಾಡುವ ಮೋಡಿ, ಅವರ ಲಾವಣ್ಯತೆ ನೋಡಿ ಅಸೂಯೆ ಪಟ್ಟುಕೊಳ್ಳುವರು. ನೀವು ಯಾವುದೇ ಸಮಾರಂಭ ಇರಲಿ ಅಥವಾ ಪಾರ್ಟಿ ಇರಲಿ, ಅಲ್ಲಿ ಎಲ್ಲರೂ ಅಪರಿಚಿತರೇ ಇದ್ದರೂ, ನೀವು ಅಲ್ಲಿ ಕಾಲಿಟ್ಟು ಅವರೊಂದಿಗೆ ಬೆರೆತ ತಕ್ಷಣ, ಅಲ್ಲಿನ ಮುಖ್ಯ ಆಕರ್ಷಣೆ ನೀವೇ ಆಗುತ್ತೀರಾ. ನೀವು ಎಷ್ಟು ಬೇಗ ಎಲ್ಲರ ಮನಸೂರೆ ಮಾಡುತ್ತೀರಾ ಎನ್ನುವುದೇ ನಿಮ್ಮನ್ನು ನೋಡಿ ಎಲ್ಲರು ಹೊಟ್ಟೆ ಉರಿದುಕೊಳ್ಳುವಂತೆ ಮಾಡುತ್ತದೆ.

ಕಟಕ

ಕಟಕ ರಾಶಿಯವರು ತುಂಬಾ ಗಟ್ಟಿಯಾದ, ಹೃದಯಕ್ಕೆ ಹತ್ತಿರವಾದ ಸ್ನೇಹಕ್ಕೆ ಹೆಸರುವಾಸಿ. ತುಂಬಾ ಭಾವನಾತ್ಮಕ, ನಿಯತ್ತಿನ ಮತ್ತು ಸೂಕ್ಷ್ಮ ವ್ಯಕ್ತಿಗಳಾದ ಈ ರಾಶಿಯವರು, ಜನರೊಂದಿಗೆ ತುಂಬಾ ಆಳವಾದ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ಬೇರೆಯವರೊಂದಿಗೆ ಏನು ಹಂಚಿಕೊಳ್ಳದ ವ್ಯಕ್ತಿಗಳು ಕೂಡ ನಿಮ್ಮ ಮುಂದೆ ಮನಸ್ಸು ಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಈ ನಿಮ್ಮ ಶಕ್ತಿಯೇ ಬೇರೆಯವರಲ್ಲಿ ನಿಮ್ಮ ಬಗ್ಗೆ ಅಸೂಯೆ ಮೂಡಿಸುವುದು.

ಸಿಂಹ

ಸಿಂಹ ರಾಶಿಯವರ ಬಗ್ಗೆ ಅಸೂಯೆ ಪಟ್ಟುಕೊಳ್ಳದೆ ಇರುವ ವಿಷಯ ಯಾವುದಿದೆ ಹೇಳಿ. ಎಲ್ಲಾ ಸಮಾರಂಭಗಳು, ಎಲ್ಲಾ ಪಾರ್ಟಿಗಳಿಗೂ ನಿಮಗೆ ಆಹ್ವಾನ ಬಂದೇ ಬರುತ್ತದೆ. ಏಕೆಂದರೆ ನಿಮ್ಮ ಹರ್ಷಚಿತ್ತ, ಧಾರಾಳತನ, ಬೆರೆಯುವ ಗುಣ ಎಲ್ಲವೂ ಜನರನ್ನು ನಿಮ್ಮೆಡೆಗೆ ಸೆಳೆಯುತ್ತವೆ. ಎಲ್ಲರೂ ನೀವು ಬೇಕು ಬೇಕು ಎನ್ನುವುದನ್ನ ನೋಡಿಯೇ ಜನ ನಿಮ್ಮ ಬಗ್ಗೆ ಅಸೂಯೆ ಪಟ್ಟುಕೊಳ್ಳುತ್ತಾರೆ. ಆದರೆ ಸಿಂಹ ರಾಶಿಯವರು ಸ್ವಲ್ಪ ಅಹಂ ಕೂಡ ಹೊಂದಿರುತ್ತಾರೆ.

ಕನ್ಯಾ

ನೀವು ಎಲ್ಲದರಲ್ಲೂ ಹೇಗೆ ಅಷ್ಟು ಬೇಗನೆ ಬಡ್ತಿ ಪಡೆಯುತ್ತೀರಾ ಎಂಬುದೇ ಜನರಿಗೆ ನಿಮ್ಮ ಬಗ್ಗೆ ಅಸೂಯೆ ಮೂಡಲು ಕಾರಣ. ನಿಮ್ಮ ವಿಶ್ಲೇಷಣಾತ್ಮಕ, ಪ್ರಾಯೋಗಿಕ ತಲೆ ಮತ್ತು ನಿಮ್ಮ ನಿಷ್ಪಾಪ ಕಾರ್ಯ ನಿಷ್ಠೆ ಇವೆಲ್ಲವುಗಳಿಂದ ನೀವು ನಿಮ್ಮ ವೃತ್ತಿಯಲ್ಲೇ ಆಗಲಿ ಅಥವಾ ಮನೆಯ, ಕುಟುಂಬದ ಜವಾಬ್ದಾರಿಗಳಲ್ಲಿ ಆಗಲಿ ತುಂಬಾ ಬೇಗ ಬಡ್ತಿಯನ್ನು ಪಡೆಯುತ್ತಾ ಹೋಗುತ್ತೀರಾ.

ತುಲಾ

ತುಲಾ ರಾಶಿಯವರು ಎಲ್ಲದರಲ್ಲೂ ತುಲನೆ ಅಂದರೆ ಬ್ಯಾಲೆನ್ಸ್ ಹೊಂದಿರುತ್ತಾರೆ. ನಿಮಗೆ ಸುತ್ತಾಡುವುದು, ಪ್ರವಾಸ ಮಾಡುವುದು ಎಂದರೆ ಇಷ್ಟ. ನಿಮ್ಮ ಮನೆಯಲ್ಲಿನ ಫೋಟೋ ಆಲ್ಬಮ್ ಅಥವಾ ನಿಮ್ಮ ಫೇಸ್ಬುಕ್ ಖಾತೆಯು ಒಳ್ಳೊಳ್ಳೆ ಸ್ಥಳಗಳಲ್ಲಿನ ನಿಮ್ಮ ಭಾವಚಿತ್ರಗಳೊಂದಿಗೆ ತುಂಬಿರುತ್ತವೆ. ನಿಮ್ಮ ಜೀವನವು ಎಷ್ಟೊಂದು ಶಾಂತಿ, ಉಲ್ಲಾಸದಿಂದ ತುಂಬಿದ್ದು, ಎಷ್ಟು ಬಣ್ಣಮಾಯವಾಗಿದೆ ಎಂದು ಬೇರೆಯವರಿಗೆ ಅನಿಸುವುದು. ಇದೇ ಅವರಲ್ಲಿ ಅಸೂಯೆ ಮೂಡಿಸುವುದು.

ವೃಷ್ಚಿಕ

ಇವರು ಬಹಳಷ್ಟು ಸಂವೇದನಾಶೀಲರು ಮತ್ತು ಪರಾನುಭೂತಿ ಹೊಂದಿರುವ ವಯಕ್ತಿಗಳು ಆಗಿರುತ್ತಾರೆ. ಆದರೆ ಇವರು ಬಾಹ್ಯವಾಗಿಯೂ ಬಹಳಷ್ಟು ಆಕರ್ಷಣೀಯ ವ್ಯಕ್ತಿಗಳು ಆಗಿರುತ್ತಾರೆ. ಇದರ ಅರ್ಥ ಅವರು ನೋಡಲು ಬಹಳ ಚೆನ್ನಾಗಿರುತ್ತಾರೆ ಎಂದೇ ಆಗಬೇಕಿಲ್ಲ, ಅವರ ನಡೆ, ಮಾತುಗಳು, ಅವರು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ರೀತಿಯು ಇತರರ ಕಣ್ಣಿಗೆ ಮಾದಕ ಎನಿಸುವಂತದ್ದು ಆಗಿರುತ್ತದೆ. ಈ ಮಾದಕತೆ ನೋಡಿಯೇ ಜನರು ಅಸೂಯೆ ಪಟ್ಟುಕೊಳ್ಳುವರು.

ಧನು

ಅತ್ಯಂತ ಹೆಚ್ಚು ಪ್ರವಾಸ ಮಾಡುವ ರಾಶಿಯ ಜನರೆಂದರೆ ಅದು ಧನುರಾಶಿಯ ಜನ. ಇವರು ಯಾವುದೇ ವಿಷಯಕ್ಕೆ ಜೋತುಬೀಳುವ ವ್ಯಕ್ತಿಗಳಲ್ಲ. ಇವರು ತಮ್ಮ ಮನಸ್ಸಿಗೆ ಮುದನೀಡುವಂತ, ತಾವು ಪರಿಸರದೊಂದಿಗೆ ಮುಕ್ತವಾಗಿ ಬೆರೆಯುವಂತಹ ಸ್ಥಳಗಳಿಗೆ ಭೇಟಿ ಕೊಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ನಿಮ್ಮ ಈ ಮುಕ್ತಭಾವ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವವೇ ಜನರಿಗೆ ನಿಮ್ಮ ಬಗ್ಗೆ ಅಸೂಯೆ ಮೂಡಿಸುವುದು.

ಮಕರ

ನೀವು ಒಂದು ವಿಷಯವನ್ನ ಸೀರಿಯಸ್ ಆಗಿ ತೆಗೆದುಕೊಂಡರೆ ಮುಗಿಯಿತು. ನೀವು ಅದನ್ನ ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದ್ದೀರಾ ಎಂದರ್ಥ. ನಿಮ್ಮ ಸ್ವಯಂ-ಶಿಸ್ತು ನಿಜಕ್ಕೂ ಬೆರಗು ಮೂಡಿಸುವಂತದ್ದು. ನೀವು ಸಣ್ಣ ಆಗಬೇಕೆಂದು ಅಂದುಕೊಂಡರೆ ಮುಗಿಯಿತು, ಅದೆಂತಹದ್ದೇ ರುಚಿಯ ಸಿಹಿತಿನಿಸು ನಿಮ್ಮ ಮುಂದೆ ಇಟ್ಟರೂ ಮುಟ್ಟುವುದಿಲ್ಲ. ನೀವು ವ್ಯಾಯಾಮ ಮಾಡಬೇಕು ಅಂದುಕೊಂಡರೆ, ಅದೆಷ್ಟೇ ಸುಸ್ತಾದರು ಅಂದುಕೊಂಡಷ್ಟು ದೂರ ಓಡಿಯೇ ತಿರುತ್ತೀರಾ. ನಿಮ್ಮ ಇಂತಹ ಕಠಿಣ ಶಿಸ್ತೇ ಜನರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿಸುವುದು.

ಕುಂಭ

ಕುಂಭ ರಾಶಿಯವರು ವಿನೋದಮಯ, ಪ್ರಗತಿಪರ ಚಿಂತನೆವುಳ್ಳ ಮತ್ತು ಸ್ವಾವಲಂಬಿ ವ್ಯಕ್ತಿಗಳಾಗಿರುತ್ತಾರೆ. ಸಾಮಾಜಿಕ ವಿಷಯಗಳ ಬಗ್ಗೆಯು ನೀವು ಎಷ್ಟೊಂದು ಜ್ಞಾನ ಹೊಂದಿದ್ದೀರಿ ಎಂಬುದು ಜನರನ್ನ ಚಕಿತಗೊಳಿಸುತ್ತದೆ. ಸಾಮಾಜಿಕ ವಿಷಯ, ವಿಜ್ಞಾನದಿಂದ ಹಿಡಿದು ಮನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆಯೂ ನಿಮಗೆ ನಿಮ್ಮದೇ ಆದ ಸರಿಯಾಗಿ ಯೋಚಿಸಿ, ರಚಿಸಿದ ಅಭಿಪ್ರಾಯ ಇರುತ್ತದೆ. ಈ ಜ್ಞಾನವನ್ನೇ ಜನರು ನಿಮ್ಮಲ್ಲಿ ಪ್ರಶಂಸಿಸುವುದು. ಇದರ ಬಗ್ಗೆಯೇ ಅವರಿಗೆ ಅಸೂಯೆ ಮೂಡುವುದು.

ಮೀನಾ

ನೀವು ಹುಟ್ಟುತ್ತಲೇ ನಿಮ್ಮಲ್ಲಿ ಒಬ್ಬ ಕಲಾವಿದನು ಹುಟ್ಟಿರುತ್ತಾನೆ. ಅದು ಚಿತ್ರಕಲೆ, ಬರವಣಿಗೆ, ಸಂಗೀತ, ನಾಟಕಕಲೆ ಅಥವಾ ಇನ್ನ್ಯಾವುದೋ ಕಲೆ ಇರಲಿ. ಆ ಕಲೆಗೆ ನೀವು ಸೌಂದರ್ಯ, ಭಾವನೆ ಮತ್ತು ನೈಜ್ಯತೆಯನ್ನ ತುಂಬಿ ಜೀವ ಕೊಡುತ್ತೀರಾ. ನಿಮ್ಮ ಈ ಶಕ್ತಿಯೇ ಎಲ್ಲರು ನಿಮ್ಮನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಳ್ಳುವಂತೆ ಮಾಡುವುದು.

Leave a Reply

%d bloggers like this: