ಹೆರಿಗೆ ಮುನ್ನದ ತಳುಕಿನ ಶರೀರ ಮರಳಿ ಪಡೆಯಲಿರುವ ನಿಶ್ಚಿತವಾದ ಮಾಂತ್ರಿಕ ನಿಯಮಗಳು

“ಮಗುವಾದ ಬಳಿಕ ನನ್ನ ಹಳೆಯ ಜೀನ್ಸ್ ಪ್ಯಾಂಟುಗಳನ್ನು ನನ್ನಿಂದ ಧರಿಸಲು ಸಾಧ್ಯವಾಗುವುದೇ…?”ಈ ಪ್ರಶ್ನೆಯನ್ನು ಹಲವು ತಾಯಿಯಂದಿರು ತಮ್ಮ ವೈದ್ಯರಲ್ಲಿ ಕೇಳಿರುತ್ತಾರೆ. ಇದಕ್ಕೆ ಸರಿಯಾದ ಉತ್ತರವಿಲ್ಲ. ಆದರೆ ನೀವು ಕಠಿಣ ಪರಿಶ್ರಮಿಸಿದರೆ ಮೊದಲಿನ ಶರೀರ ರಚನೆಯನ್ನು ಮರಳಿ ಪಡೆಯಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. “ ಮಂತ್ರಕ್ಕೆ ಮಾವಿನಕಾಯಿ ಉದುರುವುದೇ…?”

ಈ ಹೊಸ ಶರೀರವನ್ನು ಪಡೆಯಲು ಒಂಬತ್ತು ತಿಂಗಳು ಬೇಕಾಗಿಲ್ಲವೆ.. ಹಾಗಿದ್ದರೆ ಅದನ್ನು ಮರಳಿ ಪಡೆಯಲು ಕನಿಷ್ಟ ಪಕ್ಷ ಒಂಬತ್ತು ತಿಂಗಳಾದರೂ ಶತಪ್ರಯತ್ನ ಬೇಕಲ್ಲವೇ..?

ಕೆಲವು ಸರಳ ರೀತಿಗಳಲ್ಲಿ ಸುಂದರ ಕಾಯವನ್ನು ಹೇಗೆ ಮರಳಿ ಪಡೆಯಬಹುದೆಂದು ಕೆಳಗೆ ನೀಡಲಾಗಿದೆ

(೧) ನಿಮ್ಮ ಕಾಲೋರೀ ಸೇವನೆಯ ಬಗ್ಗೆ ಗಮನವಿರಿಸಿ

ನೀವು ಸೇವಿಸುವ ಕ್ಯಾಲರಿಗಳ ಬಗ್ಗೆ ಒಂದು ವೇಳಾಪಟ್ಟಿ ರಚಿಸಿರಿ. ಮೊಲೆಯೂಡಿಸುವ ತಾಯಿಗೆ ೨೪೦೦ ಕ್ಯಾಲೋರಿಗಳು ದಿನವೂ ಬೇಕಾಗುತ್ತದೆ. ಆದರೆ ಎದೆ ಹಾಲೂಡಿಸದ ತಾಯಿಗೆ ೨೦೦೦ಕ್ಯಾಲರಿಯು ಸಾಕಾಗುತ್ತದೆ. ಆದ ಕಾರಣ ಇಷ್ಟು ಕ್ಯಾಲೋರಿಗಳು ದಿನವೂ ಸೇವಿಸುತ್ತಿದ್ದೀರೆಂದು ಖಾತರಿಪಡಿಸಿಕೊಳ್ಳಬೇಕು. ಆದರೆ ಅದು ಜಂಕ್ ಫುಡ್ ಆಗಬಾರದು. 

(೨) ಪೋಷಕಾಂಶಗಳು

ಈಗ ತಾನೇ ತಾಯಿಯರಾಗಿ ಬಡ್ತಿ ಪಡೆದ ಸ್ತ್ರೀಯರು ಧಾರಾಳವಾಗಿ ಕಬ್ಬಿಣ, ಕ್ಯಾಲ್ಸಿಯಂ ಫೋಲೇಟ್, ವಿಟಾಮಿನ್ ಸಿ ಮತ್ತು ಪ್ರೋಟೀನ್ಗಳನ್ನು ಸೇವಿಸಬೇಕು. ಆದ ಕಾರಣ,ನೀವು ಸೇವಿಸುವ ಆಹಾರವು ಇವುಗಳನ್ನೆಲ್ಲ ಒಳಗೊಂಡಿರಬೇಕು. ಶರೀರವು ತನ್ನ ಮೊದಲಿನ ಆಕೃತಿಗೆ ಮರಳ ಬೇಕೆಂದಿದ್ದರೆ ಇವೆಲ್ಲವೂ ಅಗತ್ಯ.

(೩) ಆಹಾರ ಸೇವನೆಯ ಪ್ರಮಾಣವನ್ನು ಬದಲಿಸಿ

ನಿಮ್ಮ ಬಟ್ಟಲನ್ನು ಆಹಾರದಿಂದ ತುಂಬಿಸದಿರಿ. ನೀವು ಏನನ್ನು, ಎಷ್ಟರ ಮಟ್ಟಿಗೆ ಸೇವಿಸುತ್ತಿದ್ದೀರೆನ್ನುವುದರ ಬಗ್ಗೆ ನಿಗಾ ವಹಿಸಿ. ದಿನವಿಡೀ ಆಹಾರವನ್ನು ಸೇವಿಸುತ್ತಿರಿ.ಆದರೆ ಒಮ್ಮೆಗೇ ಭಕಾಸುರನಂತೆ ಸೇವಿಸದೇ, ಹಲವಾರು ಬಾರಿ ಸ್ವಲ್ಪ ಸ್ವಲ್ಪವಾಗಿ ಸೇವಿಸಿ.

(೪) ಜಂಕ್ ಫುಡ್ ಗೇ ದೊಡ್ಡ ನಮಸ್ಕಾರ

ಚಿಪ್ಸಿನಂತಹ ಕುರುಕುಲು ತಿಂಡಿಗಳಿಂದ ಮಾರುದ್ದ ದೂರವಿರಿ. ಸೋಡಾ ಅಥವಾ ತಂಪು ಪಾನೀಯಗಳತ್ತ ತಿರುಗಿಯೂ ನೋಡದಿರಿ. ಜಂಕ್ ಫುಡ್ ಗಳತ್ತ ಕಣ್ಣೆತ್ತಿಯೂ ನೋಡದಿರುವುದೇ ನಿಮಗಿರುವ ಅತೀ ದೊಡ್ಡ ಸವಾಲ್. 

(೫) ಧಾರಾಳವಾಗಿ ನೀರು ಕುಡಿಯಿರಿ

ಶರೀರವು ಧಾರಾಳವಾಗಿ ದ್ರವಾಹಾರಗಳನ್ನು ಬಯಸುವ ಸಮಯವಿದು. ಆಗಿಂದಾಗ್ಗೆ ನೀರು ಕುಡಿಯುತ್ತಲೇ ಇರಿ.ಜೊತೆಯಲ್ಲಿ ನಾರಿನಂಶ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ. ತರಕಾರಿ ಅಥವಾ ಹಣ್ಣುಗಳ ರಸವನ್ನು( ಜ್ಯೂಸ್) ಕೂಡ ಸೇವಿಸಬಹುದು.

(೬) ತರಕಾರಿ ಮತ್ತು ಹಣ್ಣುಗಳನ್ನು ಶೇಖರಿಸಿಡಿ

ನಿಮ್ಮ ದಿನನಿತ್ಯದ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಲು ಮರೆಯದಿರಿ. ಹಣ್ಣು ಹಾಗೂ ತರಕಾರಿಗಳನ್ನು ಸವಿಯಲು ಹತ್ತು ಹಲವು ಮಾರ್ಗಗಳಿವೆ. ಆದರೆ ಅದರ ಮೇಲೆ ಮಯೋನೀಸ್ ಅಥವಾ ಚೀಸ್ ಅನ್ನು ಸೇರಿಸದಿರಿ. 

(೭) ಹೊಸರುಚಿಗಳನ್ನು ಪರೀಕ್ಷಿಸಿ

ನೀವು ಪಾಕ ಪ್ರವೀಣರಾಗಿದ್ದರೆ, ಸಾಮಾಜಿಕ ಜಾಲಗಳನ್ನು ನಿಮ್ಮ ನೆಚ್ಚಿನ ಸಂಗಾತಿಯನ್ನಾಗಿಸಿಕೊಳ್ಳಿ. ಅವುಗಳಿಂದ ಕಡಿಮೆ ಕ್ಯಾಲೋರಿ ಖಾದ್ಯಗಳನ್ನು ತಯಾರಿಸುವುದು ಹೇಗೆಂದು ನೋಡಿ,ತಿಳಿದುಕೊಂಡು ಅವುಗಳನ್ನು ಮನೆಯಲ್ಲಿ ಪರೀಕ್ಷಿಸಿರಿ. 

(೮) ವ್ಯಾಯಾಮ

ಇಷ್ಟೆಲ್ಲಾ ವಿವರಣೆ ನೀಡಿದ ಬಳಿಕ ವ್ಯಾಯಾಮವನ್ನು ರೂಢಿಸಿಕೊಳ್ಳದಿದ್ದರೆ ಹೇಗೆ…? ವ್ಯಾಯಾಮವಂತೂ ಖಡಾಖಂಡಿತವಾಗಿ ಮಾಡಲೇಬೇಕೆಂದು ನಿಮಗೆ ತಿಳಿದಿದೆಯಲ್ಲವೇ….? ವ್ಯಾಯಾಮವಿಲ್ಲದೇ ಯಾವುದೇ ಶರೀರ ಭಾರವನ್ನು ಕಡಿಮೆಗೊಳಿಸಲಾಗದು. ದಿನವನ್ನು ಜಾಗಿಂಗ್ ಮತ್ತು ಲಘುವ್ಯಾಯಾಮಗಳಿಂದ ಪ್ರಾರಂಭಿಸಿರಿ. ನಂತರ ಇದನ್ನೇ ದಿನಚರಿಯನ್ನಾಗಿಸಬಹುದು.

(೯) ಮಾಡುವ ಕೆಲಸವನ್ನೆಲ್ಲಾ ಪ್ರೀತಿಸಿರಿ

ಕರ್ತವ್ಯವೆಂದು ಭಾವಿಸಿ ಯಾವುದನ್ನು ಮಾಡದಿರಿ. ನಿಮಗೆ ಸಂತೋಷ ನೀಡುವಂತಹ ಕಾರ್ಯಗಳನ್ನು ಮಾತ್ರ ಮಾಡಿರಿ. ಕ್ರಮೇಣವಾಗಿ, ಮಾಡುವ ಕೆಲಸವನ್ನು ಸಂತೋಷದಿಂದ ನಿಭಾಯಿಸಬಲ್ಲಿರಿ ಹಾಗೂ ಸಕಾರಾತ್ಮಕ ಫಲಗಳನ್ನು ಅನುಭವಿಸುವಿರಿ ಎಡೆಬಿಡದೆ ಪ್ರಯತ್ನಿಸಿದ ಪ್ರತಿ ಓರ್ವ ತಾಯಿಯರು ಸಂತೋಷ ಪೂರ್ವಕವಾಗಿ, ಸಕಾರಾತ್ಮಕವಾದ ಫಲಗಳನ್ನು ಅನುಭವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.ನೀವು ಕೂಡ ಮೇಲೆ ತಿಳಿಸಿದ ಸರಳ ರೀತಿಗಳಿಂದ ನಿಮ್ಮ ಶರೀರ ರಚನೆಯನ್ನು ಬದಲಾಯಿಸಿ ಹಾಗೂ ನಿಮ್ಮ ಸಲಹೆಯ ಅಗತ್ಯವಿರುವ ಇತರ ತಾಯಿಯಂದಿರಿಗೂ ಇದನ್ನು ತಲುಪಿಸಿ.

Leave a Reply

%d bloggers like this: