ಗಂಡನ ಪಾತ್ರ : ಬದಲಾಗುವ ಮತ್ತು ಬೆಳೆಯುತ್ತಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಎದುರಿಸುವುದು ಹೇಗೆ?

ಮದುವೆ ಎಂಬುದು ಇಬ್ಬರ ನಡುವಿನ ಸಮಾನ ಬಾಳ್ವೆ, ಮತ್ತು ಪ್ರತಿ ಸಮಯದಲ್ಲೂ ಒಬ್ಬರನ್ನು ಒಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು, ಸುಖ ದುಃಖಗಳಲ್ಲಿ ಜೊತೆಯಾಗಿರುವುದು. ಜವಾಬ್ದಾರಿಗಳನ್ನು ಗಂಡ ಹೆಂಡತಿಯರು ಹಂಚಿಕೊಂಡಾಗ ಅವರಿಬ್ಬರ ನಡುವೆ ಉತ್ತಮ ಬಾಂದವ್ಯ ಕೂಡ ಬೆಳೆಯುತ್ತದೆ. ಜೀವನದಲ್ಲಿ ಅವರಿಬ್ಬರಿಗೂ ಅವರದೇ ಆದ ಕರ್ತವ್ಯಗಳಿದ್ದು, ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಭಿನ್ನವಾಗಿರುತ್ತದೆ.

ಗಂಡನಾಗಿ ಅವನ ಪಾತ್ರ

ಗಂಡನಾಗಿ ನೀವು ಮನೆಯ ಜವಾಬ್ದಾರಿ ಮತ್ತು ಸಂಸಾರ ನಡೆಸಲು ನಿಮ್ಮ ಕರ್ತವ್ಯಗಳನ್ನು ನೀವು ಮಾಡುವಿರಿ, ಆದರೆ ನೀವು ಒಬ್ಬ ಉತ್ತಮ ಪುರುಷನೆಂದು ಅನ್ನಿಸಿಕೊಳ್ಳಲು ನಿಮ್ಮ ಪತ್ನಿ ಮತ್ತು ಕುಟುಂಬವನ್ನು ಖುಷಿಯಾಗಿ ನೋಡಿಕೊಳ್ಳಬೇಕು. ಅದನ್ನು ನೀವು ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಕೆಲವು ಸಲಹೆಗಳು

೧.ನಾಯಕತ್ವ ವಹಿಸಿ

ನೀವು ಮನೆಯ ಮುಂದಾಳತ್ವ ವಹಿಸಿಕೊಂಡ ನಂತರ ತಾನಾಗಿಯೇ ಮನೆಯ ಮೇಲೆ ನಿಮಗೆ ಒಂದು ಹಿಡಿತ ಬರುತ್ತದೆ. ಉತ್ತಮ ನಾಯಕತ್ವ ಇರುವವನು ಉತ್ತಮ ದಾರಿಯನ್ನು ಅರಿತಿರುವನು, ಅದರಲ್ಲಿ ಹೋಗುವನು ಮತ್ತು ಒಳ್ಳೆಯ ದಾರಿಯನ್ನು ತೋರಿಸುವನು.

 
೨.ಅವಳನ್ನು ರಕ್ಷಿಸಿ

ಇದು ನಿಮ್ಮ ಮೊದಲ ಕರ್ತವ್ಯ ಕೂಡ ಹೌದು. ಅವಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ರಕ್ಷಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ಜೊತೆಯಲ್ಲಿ ಇರುವಾಗ ಅವಳಿಗೆ ನಾನು ಸುರಕ್ಷಿತ ಎಂಬ ಭಾವನೆ ಬರುವಂತೆ ಮಾಡಿ.

೩.ಪ್ರೀತಿಸಿ

ಅವಳನ್ನು ಮಾನಸಿಕವಾಗಿ ಖುಷಿಯಾಗಿರಿಸಲು ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಲು ಅವಳನ್ನು ಮಿತಿಮೀರಿ ಪ್ರೀತಿಸಿ. ನೀವು ಅವಳನ್ನು ಪ್ರೀತಿಸುವಿರಿ, ಗೌರವಿಸುವಿರಿ ಎಂದು ಹೇಳುವ ಬದಲು ನಿಮ್ಮ ನಡತೆಯಲ್ಲಿ ಅದನ್ನು ಅವಳಿಗೆ ತೋರಿಸಿ.

೪.ಅವಶ್ಯಕತೆಗಳನ್ನು ಪೂರೈಸಿ

ಮೂಲಭೂತವಾಗಿ ಬೇಕಾಗಿರುವ ನೀರು, ಮನೆ, ಊಟ ಮತ್ತು ಬಟ್ಟೆಯನ್ನು ಪೂರೈಸಿ. ಇದರ ಜೊತೆ ಅವಳಿಗೆ ಬೇರೆ ಏನಾದರು ಅವಶ್ಯ ಇದೆಯೇ ಎಂಬುದನ್ನು ತಿಳಿದು ಅದನ್ನು ಪೂರೈಸಲು ಪ್ರಯತ್ನಿಸಿ. ಅವಳ ಜೀವನದ ವಿವಿಧ ಹಂತಗಳಲ್ಲಿ ವಿವಿಧ ಅವಶ್ಯಗಳು ಬೇಕಾಗಬಹುದು.

೫.ತಾಳ್ಮೆ ಇರಲಿ

ಕೆಲವೊಮ್ಮೆ ನಿಮ್ಮ ಪತ್ನಿ ನಿಮ್ಮ ಮೇಲೆ ರೇಗಬಹುದು ಅಥವಾ ಕೋಪಿಸಿಕೊಳ್ಳಬಹುದು, ಆದರೆ ಅವಳ ಮನದಲ್ಲಿ ನಿಮಗೆ ಮೊದಲ ಸ್ಥಾನ ಇದ್ದು, ನೀವು ಮುಂದೆ ಬರಲಿ ಅಥವಾ ತಪ್ಪು ಮಾಡದಿರಲಿ ಎಂಬ ಕಲ್ಪನೆಯಿಂದ ಹಾಗೆ ನಡೆದುಕೊಂಡಿರಬಹುದು. ನೀವು ಅವಳ ವಿರುದ್ಧ ದ್ವನಿ ಎತ್ತುವ ಮೊದಲು ಅವಳಿಗೆ ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಸಿ. ಅವಳ ಸಣ್ಣ ಆಸೆಯನ್ನು ನೀವು ಕಡೆಗಣಿಸುವುದು ಅವಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

೬.ಸಮಯ ನೀಡಿ

ನೀವು ಮನೆಯ ಸಂತೋಷಕ್ಕಾಗಿ ನಿಮ್ಮ ಕೆಲವು ಖುಷಿಯನ್ನು ತ್ಯಾಗ ಮಾಡಿರುವಿರಿ ಎಂದು ನಮಗೆ ತಿಳಿದಿದೆ, ಆದರೆ ನಿಮ್ಮ ಕುಟುಂಬದ ಜೊತೆ ದಿನದಲ್ಲಿ ಸ್ವಲ್ಪ ಕಾಲ ಕಳೆಯುವುದರಿಂದ ನಿಮ್ಮ ಕುಟುಂಬದ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದಲ್ಲಿ ಬಾಂದವ್ಯ ಮೂಡುತ್ತದೆ ಮತ್ತು ಹೊಂದಾಣಿಕೆ, ಸಹಾಯ ಮತ್ತು ಪ್ರೀತಿ ಹೆಚ್ಚಲು ಸಹಾಯ ಆಗುತ್ತದೆ.

೭.ಸಮತೋಲನ

ನೀವು ಗಂಡನಾಗಿ ಮತ್ತು ಪೋಷಕನಾಗಿ ಯಾವುದೇ ಒಂದು ವಿಷಯಕ್ಕೂ ಕೊರತೆ ಅಥವಾ ಲೋಪ ಬರದಂತೆ ನೋಡಿಕೊಳ್ಳಬೇಕು. ಯಾವಾಗ ಜೋಡಿಗಳು ಪೋಷಕರಾಗುತ್ತಾರೆ ಆಗ ಅವರ ಗಮನ ಸಂಪೂರ್ಣವಾಗಿ ಮಕ್ಕಳ ಮೇಲೆ ಕೇಂದ್ರೀಕರಿಸುತ್ತದೆ ಇದು ಸಾಮಾನ್ಯ, ಆದರೆ ನಿಮ್ಮ ಪತ್ನಿಯನ್ನು ನೀವು ಮೊದಲಿನಂತೆ ಪ್ರೀತಿಸಿದರು ಅದನ್ನು ತೋರಿಸಿಕೊಳ್ಳುವುದರಲ್ಲಿ ಅಥವಾ ವ್ಯಕ್ತಪಡಿಸುವುದರಲ್ಲಿ ನೀವು ವಿಫಲವಾಗಿರಬಹುದು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸುವುದು ಉತ್ತಮ.

Leave a Reply

%d bloggers like this: